ದಾವಣಗೆರೆ: ರಾಜಸ್ಥಾನದಿಂದ ಮಾದಕ ವಸ್ತುಗಳನ್ನು ತರಿಸಿ ದಾವಣಗೆರೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 10 ಲಕ್ಷ ರೂಪಾಯಿ ಮೌಲ್ಯದ 290 ಗ್ರಾಂ ಸಿಂಥೆಟಿಕ್ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಶಾಮನೂರು ನಿವಾಸಿ ಕಾಂಗ್ರೆಸ್ ಮುಖಂಡ ಎಸ್.ಜಿ. ವೇದಮೂರ್ತಿ(53) ರಾಜಸ್ಥಾನದ ಜೋಧಪುರದ ಲೋಣಿ ಗ್ರಾಮದ ರಾಮ್ ಸ್ವರೂಪ್(33) ಧೋಲಾರಾಮ್(36), ದಾವಣಗೆರೆಯ ದೇವ್ ಕಿಶನ್(35) ಬಂಧಿತ ಆರೋಪಿಗಳು.
ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಶಕ್ಕೆ ಪಡೆದ ಮಾದಕ ವಸ್ತುಗಳಲ್ಲಿ 200 ಗ್ರಾಂ ಅಫೀಮು, 90 ಗ್ರಾಂ ಎಂಡಿಎಂಎ ಡ್ರಗ್ಸ್ ಇದ್ದು ಒಂದು ಲಕ್ಷ ರೂಪಾಯಿ ನಗದು ಸೇರಿ 11 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವೇದಮೂರ್ತಿ ಬಳಿ ಮಾದಕ ವಸ್ತು ಇರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾವಣಗೆರೆಯ ವಿದ್ಯಾನಗರ ಠಾಣೆ ಪೋಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.

