ಬೆಂಗಳೂರು: ಪ್ರಿಯಕರನೊಂದಿಗೆ ಶೋಕಿ ಮಾಡಲು ಚಿಕ್ಕಪ್ಪನ ಮನೆಯಲ್ಲಿಯೇ ಕೆಜಿಗಟ್ಟಲೆ ಚಿನ್ನಾಭರಣ ಕಳವು ಮಾಡಿದ್ದ ವಿದ್ಯಾರ್ಥಿನಿ ಸೇರಿ ನಾಲ್ವರು ಆರೋಪಿಗಳನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೈರತಿ ಕೊತ್ತನೂರಿನ ಸಚಿತಾ, ಆಕೆಯ ಪ್ರಿಯಕರ ಯಶವಂತ್, ಪದವಿ ವಿದ್ಯಾರ್ಥಿ ತನುಷ್, ಎಲ್.ಎಲ್.ಬಿ. ವಿದ್ಯಾರ್ಥಿ ರಾಮಪ್ರಕಾಶ್ ಬಂಧಿತ ಆರೋಪಿಗಳು. ಇವರು ಕಳವು ಮಾಡಿದ್ದ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 10 ಲಕ್ಷ ರೂ. ಜಪ್ತಿ ಮಾಡಲಾಗಿದೆ.
ಕೊತ್ತನೂರು ನಿವಾಸಿ ಬಿ.ಎನ್. ಶ್ರೀನಿವಾಸ್ ಅವರ ಮನೆಯ ಲಾಕರ್ ನಲ್ಲಿದ್ದ ಒಂದು ಕೆಜಿಗೂ ಅಧಿಕ ಚಿನ್ನಾಭರಣ ಕಳುವಾಗಿದ್ದು, ಜೂನ್ ಮೊದಲ ವಾರ ದೂರು ನೀಡಲಾಗಿತ್ತು. ಮನೆ ಕೆಲಸ ಮಾಡುವ ಇಬ್ಬರು ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರೂ ಕಳವು ಮಾಡಿಲ್ಲ ಎನ್ನುವುದು ದೃಢಪಟ್ಟಿದೆ.
ತನಿಖೆ ಚುರುಕುಗೊಳಿಸಿದ ಪೊಲೀಸರು ಶ್ರೀನಿವಾಸ್ ಮನೆಗೆ ಯಾರ್ಯಾರು ಬಂದು ಹೋಗುತ್ತಿದ್ದರು ಎನ್ನುವ ಮಾಹಿತಿ ಕಲೆ ಹಾಕಿದಾಗ ಅವರ ಅಣ್ಣನ ಮಗಳು ಸಚಿತಾ ಆಗಾಗ ಬರುತ್ತಿದ್ದ ವಿಚಾರ ಗೊತ್ತಾಗಿದೆ. ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಚಿಕ್ಕಪ್ಪನ ಮನೆಯಲ್ಲಿ ಆರು ತಿಂಗಳ ಕಾಲ ಚಿನ್ನದೋಚಿದ್ದ ರಹಸ್ಯ ಬಯಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಸಚಿತಾಗೆ ಸಹಪಾಠಿ ಯಶವಂತನ ಜೊತೆ ಪ್ರೀತಿ ಉಂಟಾಗಿತ್ತು. ಇಬ್ಬರೂ ಮೋಜು ಮಸ್ತಿ ಶೋಕಿಗಾಗಿ ಹಣ ಹೊಂದಿಸಲು ಕೃತ್ಯವೆಸಗಿದ್ದಾರೆ. ಶ್ರೀನಿವಾಸ್ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ ಇರುವುದನ್ನು ಅರಿತಿದ್ದ ಸಚಿತಾ ಹಂತ ಹಂತವಾಗಿ ಚಿನ್ನಾಭರಣ ಕಳವು ಮಾಡಿ ಯಶವಂತನಿಗೆ ಕೊಟ್ಟಿದ್ದಳು. ಯಶವಂತ ಈ ಆಭರಣಗಳನ್ನು ಸ್ನೇಹಿತರಾದ ತನುಷ್ ಮತ್ತು ರಾಮ ಪ್ರಕಾಶ್ ಅವರಿಗೆ ನೀಡಿದ್ದು ಮೂವರು ಆಭರಣಗಳನ್ನು ಪರಿಚಯದ ಅಕ್ಕಸಾಲಿಗರಿಂದ ಕರಗಿಸಿ ಗಟ್ಟಿಯನ್ನಾಗಿ ಮಾಡಿ ಮಾರಾಟ ಮಾಡಿದ್ದರು. ಚಿನ್ನದ ಗಟ್ಟಿ ಮಾರಾಟದಿಂದ ಬಂದ ಲಕ್ಷಾಂತರ ರೂ.ಗಳಿಂದ ಗೋವಾ ಪ್ರವಾಸ ಸೇರಿ ಮೋಜು-ಮಸ್ತಿಗೆ ಖರ್ಚು ಮಾಡಿದ್ದರು ಎನ್ನಲಾಗಿದೆ.