ದಾವಣಗೆರೆ: ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿಗೆ ಯತ್ನಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ದಾವಣಗೆರೆಯ ಸುಷ್ಮಿತಾ, ಚನ್ನಬಸಪ್ಪ, ಕೃಷ್ಣ ಮತ್ತು ರಾಹುಲ್ ಬಂಧಿತ ಆರೋಪಿಗಳು. ಆರೋಪಿ ಸಂಜನಾ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಶುಶ್ರೂಷಕಿಯಾಗಿರುವ ಸುಷ್ಮಿತಾ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ 66 ವರ್ಷದ ಉದ್ಯಮಿ ಜೊತೆಗೆ ಸ್ನೇಹ ಬೆಳೆಸಿದ್ದರು. ಅದು ಸಲುಗೆಗೆ ತಿರುಗಿ ಕಷ್ಟ ಎಂದು ಕೆಲವು ದಿನಗಳ ಹಿಂದೆ ಹಣಕಾಸು ನೆರವು ಕೋರಿದ್ದರು.
ಇದೇ ವಿಚಾರವಾಗಿ ಮಾತನಾಡಬೇಕಿದೆ ಎಂದು ಉದ್ಯಮಿಯನ್ನು ಅಪಾರ್ಟ್ಮೆಂಟ್ ಗೆ ಕರೆಸಿಕೊಂಡು ತನ್ನೊಂದಿಗೆ ಬಂದಿದ್ದ ಸಂಜನಾ ಅವರನ್ನು ಉದ್ಯಮಿ ಇದ್ದ ಕೊಠಡಿಯ ಒಳಗೆ ಕಳುಹಿಸಿದ್ದರು. ಯುವತಿಯೊಂದಿಗೆ ಅರೆಬೆತ್ತಲೆ ಸ್ಥಿತಿಯಲ್ಲಿದ್ದಾಗ ಕೊಠಡಿಗೆ ನುಗ್ಗಿ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು 25 ಲಕ್ಷ ರೂ. ಹಣ ಕೊಡುವಂತೆ ಬೆದರಿಸಿದ್ದಾರೆ. ಹಣ ನೀಡದಿದ್ದರೆ ಜಾಲತಾಣದಲ್ಲಿ ವಿಡಿಯೋ ಫೋಟೋ ಹಾಕುವುದಾಗಿ ಬೆದರಿಸಿದ್ದು, ಈ ವೇಳೆ ಉದ್ಯಮಿ 12 ಲಕ್ಷ ರೂ. ಕೊಡುವುದಾಗಿ ಹೇಳಿ ಬಂದಿದ್ದಾರೆ. ನಂತರ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಬಳಿಕ ಅವರು ವಿದ್ಯಾನಗರ ಠಾಣೆ ಪೋಲೀಸರಿಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

