ಬೆಂಗಳೂರು : ಚಿಂತಾಮಣಿ ನಗರಸಭೆ ಜೆಡಿಎಸ್ ಸದಸ್ಯನ ಮೇಲೆ ಹಲ್ಲೆ ವಿಚಾರ ಘಟನೆ ಖಂಡಿಸಿ ಮಾಜಿ ಸಿಎಂ H.D.ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಮುಖಂಡರು, ನಗರಸಭೆ ಸದಸ್ಯರಾದ ಶ್ರೀ ಅಗ್ರಹಾರ ಮುರಳಿ ಅವರ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಪೈಶಾಚಿಕ ದಾಳಿ ನಡೆಸಿರುವ ಘಟನೆ ಖಂಡನೀಯ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಮೇರೆ ಮೀರಿದೆ. ಗೃಹ ಇಲಾಖೆ, ಪೊಲೀಸ್ ವ್ಯವಸ್ಥೆ ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅಧಿಕಾರಿಗಳು ಆಡಳಿತ ಪಕ್ಷ ನಾಯಕರ ಕೈಗೊಂಬೆಗಳು ಆಗಿರುವ ಪರಿಣಾಮವೇ ಇಂಥ ಘಟನೆಗಳಿಗೆ ದಾರಿ ಆಗುತ್ತಿದೆ. ರಾಜ್ಯದಲ್ಲಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಪೂರ್ಣವಾಗಿ ಕುಸಿದು ಬಿದ್ದಿದೆ. ಮೊದಲು ಇಂಥ ಪ್ರಕರಣಗಳು ನಡೆಯುತ್ತಿರಲಿಲ್ಲ.
ಕೆಲ ದಿನಗಳ ಹಿಂದೆ ಹಾಸನದಲ್ಲಿ ಜೆಡಿಎಸ್ ಮುಖಂಡರಾದ ಶ್ರೀ ಕೃಷ್ಣೇಗೌಡರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹೊಳೆನರಸೀಪುರದಲ್ಲಿ ನಮ್ಮ ಪಕ್ಷದ ಮುಖಂಡರಾದ ಶ್ರೀ ಅಶ್ವತ್ಥ್ ಅವರ ಮೇಲೆ ದಾಳಿ ನಡೆಡಿತ್ತು. ಈಗ ಚಿಂತಾಮಣಿಯಲ್ಲಿ ಅಂಥದ್ದೇ ಘಟನೆ ನಡೆದಿರುವುದು ಪ್ರತಿಪಕ್ಷಗಳನ್ನು ಹೆದರಿಸಿ ಬೆದರಿಸುವ ದುಷ್ಟ ಹುನ್ನಾರವಲ್ಲದೆ ಮತ್ತೇನಲ್ಲ.
ಅದರಲ್ಲೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗುತ್ತಿದೆ. ಇದು ಸರಿ ಅಲ್ಲ, ಸಹಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಸದಾ ಶಾಂತಿ ನೆಲೆಸಿರಬೇಕು ಎನ್ನುವುದು ನಮ್ಮ ಪಕ್ಷದ ಆಶಯ. ಸರಕಾರ ಮತ್ತು ಗೃಹ ಸಚಿವರು ಕೂಡಲೇ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಪಕ್ಷದ ವತಿಯಿಂದ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
https://twitter.com/hd_kumaraswamy/status/1713101305282257397?ref_src=twsrc%5Etfw%7Ctwcamp%5Etweetembed%7Ctwterm%5E1713101305282257397%7Ctwgr%5Ec82f8bb8d00535c048503775af7a0c579582d6d6%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fkarnataka-breaking-kannada-news-live-updates-on-14th-october-karnataka-newsmysuru-dasara-cauvery-water-dispute-protest-siddaramaiah-latest-kannada-news-ayb-692855.html