HomeKarnatakaರಸ್ತೆ ಪಕ್ಕದಲ್ಲಿ ವರ್ಷಕ್ಕೆ 1 ಕೋಟಿ ತೇಗದ ಸಸಿ ನೆಡುವ ಯೋಜನೆ: ತೇಗದ ಸಿರಿ ಲಾಭಾಂಶ...

ರಸ್ತೆ ಪಕ್ಕದಲ್ಲಿ ವರ್ಷಕ್ಕೆ 1 ಕೋಟಿ ತೇಗದ ಸಸಿ ನೆಡುವ ಯೋಜನೆ: ತೇಗದ ಸಿರಿ ಲಾಭಾಂಶ ರೈತರಿಗೆ ಶೇ 70; ಸರ್ಕಾರಕ್ಕೆ ಶೇ 30 ರಷ್ಟು: ಸಿಎಂ ಮಾಹಿತಿ

ಮೈಸೂರು: ಸರ್ಕಾರಿ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ರೈತರ ಹಾಗೂ ಸರ್ಕಾರಿ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ತೇಗದ ಸಸಿಗಳನ್ನು ನೆಟ್ಟು ರೈತರೇ ಪೋಷಿಸುವ ‘ತೇಗದ ಸಿರಿ’ ಯೋಜನೆ ಜಾರಿಗೆ ತರಲಾಗುವುದು. ಈ ಯೋಜನೆಯಡಿ ವರ್ಷಕ್ಕೆ 1 ಕೋಟಿ ತೇಗದ ಸಸಿ ನೆಡಲಾಗುವುದು” ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 111 ನೇ ಜಯಂತಿ ಮಹೋತ್ಸವದ ವ್ರ‍ೇಳೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರಿ ರಸ್ತೆಗಳ ಅಕ್ಕಪಕ್ಕದ ಪ್ರತಿಯೊಬ್ಬರ ಜಮೀನಿನಲ್ಲೂ ತೇಗದ ಸಸಿಗಳನ್ನು ನೆಡಬೇಕು. ಅಲ್ಲದೇ, ಜಮೀನಿನ ಮಾಲೀಕರು ಆ ತೇಗದ ಸಸಿಯ ನಿರ್ವಹಣೆ ಹೊರಬೇಕು. ಅದರಿಂದ ಬರುವ ಲಾಭವನ್ನು ಶೇ. 70 ರಷ್ಟು ರೈತರು ಅಥವಾ ಭೂ ಮಾಲೀಕರಿಗೆ ಮತ್ತು ಸರ್ಕಾರಕ್ಕೆ ಶೇ 30‌ರಷ್ಟು‌ ಹಂಚಲಾಗುವ ವಿಶಿಷ್ಟ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.

ಇದು ಸರ್ಕಾರ ಮತ್ತು ಭೂಮಾಲೀಕರ ಪರಸ್ಪರ ಸಹಕಾರದಿಂದ ರಾಜ್ಯದ ಅರಣ್ಯ ಸಂಪತ್ತು ಹೆಚ್ಚಿಸುವ ವಿಶಿಷ್ಟ ಯೋಜನೆಯಾಗಿದೆ. ಮುಂದಿನ 25 ವರ್ಷಕ್ಕೆ ರಾಜ್ಯದಲ್ಲಿ ಹಸಿರು ಸಂಪತ್ತಾಗಿ ರೂಪುಗೊಳ್ಳುತ್ತದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿಯವರು 5 ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ರೂಪಿಸಿದ್ದರು. ಅದರಂತೆ ಈಗ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರಣ್ಯ ಇಲಾಖೆ, ಹಾಗೂ ಖಾಸಗಿ ನರ್ಸರಿಗಳಿಗೆ ತೇಗದ ಸಸಿಗಳನ್ನು ಬೆಳೆಸುವಂತೆ ಹೇಳಲಾಗುವುದು. ಅರಣ್ಯ ಅಧಿಕಾರಿಗಳು ಈ ಆಲೋಚನೆಯಿಂದ ರಾಜ್ಯದಲ್ಲಿ ಹಸಿರು ಹೆಚ್ಚಲಿದೆ ಎಂದಿದ್ದಾರೆ ಎಂದರು.

ಚೆನ್ನೈನಲ್ಲಿ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ, ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿದ್ದೇನೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಗಳು ಚರ್ಚೆಗೆ ಮುಂದಾಗಿದ್ದಾರೆ. ತುಂಗಭದ್ರಾ ವಿಚಾರದಲ್ಲಿ ತೆಲಂಗಾಣ, ಆಂಧ್ರ ಜೊತೆ ಸೇರಿ ಚರ್ಚಿಸಲಾಗಿದೆ. ಆಲಮಟ್ಟಿ, ಕೆಆರ್‌ ಎಸ್ ನಲ್ಲಿ ಹೂಳು ಎತ್ತಲು ಕೇಂದ್ರ ಸರ್ಕಾರ ಹೊಸ ನೀತಿ ರೂಪಿಸುವುದಾಗಿ ತಿಳಿಸಿದೆ. ಮೊದಲ ಬಾರಿಗೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಸೇರಿ ಅಂತರಾಜ್ಯ ನೀರಾವರಿ ವಿಚಾರದಲ್ಲಿ ಒಮ್ಮತಕ್ಕೆ ಬಂದಿರುವುದು, ಐತಿಹಾಸಿಕ ಬೆಳವಣಿಗೆ ಎಂದರು.

ಕಿರಿಯ ವಯಸ್ಸಿನಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿ ತ್ರಿವಿಧ ದಾಸೋಹಗಳಲ್ಲಿ ಸಾರ್ಥಕತೆಯನ್ನು ಕಂಡವರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ‌ಇವರ ಜಯಂತೋತ್ಸವದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ. ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ನಿರತರಾದ ಮಹನೀಯರನ್ನು ನೆನೆವುದು ನಮ್ಮೆಲ್ಲರ ಕರ್ತವ್ಯ ಎಂದರು.

ಹೊಟ್ಟೆ ಹಸಿವೆಗೆ , ಮನಸ್ಸಿನ ಹಸಿವಿಗೆ ಪ್ರಾರ್ಥನೆ ಅಗತ್ಯ. ಸಮಾಜದಲ್ಲಿ ಹಲವು ಧರ್ಮಗಳಿದ್ದರೂ ತತ್ವ ಒಂದೇ. ದೇವನೊಬ್ಬ ನಾಮ ಹಲವು ಎಂಬುದನ್ನು ನಾವೆಲ್ಲರೂ ನಂಬಿದ್ದೇವೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ಹೇಳುತ್ತಿರುತ್ತೇನೆ. ನಮ್ಮ ಬದುಕಿನಲ್ಲಿ ಕಷ್ಟಸುಖಗಳಿಗೆ ದೇವರನ್ನು ಪ್ರಾರ್ಥಿಸುತ್ತೇವೆ. ಮನಸ್ಸು ಆರೋಗ್ಯವಾಗಿದ್ದರೆ ಸಂಸ್ಕಾರ, ಮಠಗಳು ಸರಿಯಿದ್ದರೆ ಉತ್ತಮ ಸಮಾಜ, ಮಠಗಳು ಸಮಾಜದ ಶಾಂತಿ ಸೌಹಾರ್ದಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿವೆ ಎಂದರು.

ಜಾತಿವರ್ಗಗಳ ಬೇಧವಿಲ್ಲದೇ ಮಠಗಳಿಂದ ಜನರು ಅನುಕೂಲ ಕಾಣುತ್ತಿದ್ದಾರೆ. ದಕ್ಷಿಣ ಭಾರತದಲ್ಲಿನ ಶಿಕ್ಷಣ ಕ್ರಾಂತಿಗೆ ಮಠ ಮಾನ್ಯಗಳು ಮಹತ್ತರ ಕೊಡುಗೆ ನೀಡಿದೆ. ಕರ್ನಾಟಕ ಶೈಕ್ಷಣಿಕ ಕೇಂದ್ರ. ಇಲ್ಲಿನ ಜ್ಞಾನಸಂಪತ್ತು, ಮಾನವ ಸಂಪನ್ಮೂಲಗಳು ಉತ್ತಮವಾಗಿವೆ ಎಂದು ಅನೇಕ ಮಹನೀಯರು ತಿಳಿಸಿದ್ದಾರೆ. ರಾಜ್ಯದಲ್ಲಿ 46,302 ಸರ್ಕಾರಿ ಪ್ರಾಥಮಿಕ ಶಾಲೆ, 24,000 ಸಾವಿರ ಖಾಸಗಿ ಶಾಲೆಗಳಿವೆ. ಅದರಲ್ಲಿ 36 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಹಾಗೂ 57 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಠಮಾನ್ಯಗಳು, ಸರ್ಕಾರದ ಶಿಕ್ಷಣ ಕ್ರಾಂತಿಗೆ ಕೈಜೋಡಿಸದಿದ್ದರೆ, ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯವಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಸರ್ಕಾರವೊಂದರಿಂದಲೇ ಸಾಧ್ಯವಾಗದ ಕೆಲಸದಲ್ಲಿ ಮಠಮಾನ್ಯಗಳೂ ಕೈಜೋಡಿಸಿವೆ ಎಂದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೆ. ‘ನಮ್ಮ ನೀರು ನಮ್ಮ ಹಕ್ಕು’ ಹೋರಾಟಕ್ಕೆ ಸುತ್ತೂರು ಶ್ರೀಗಳು ಬೆಂಬಲ ಸೂಚಿಸಿದ್ದರು. ಈ ಹೋರಾಟ ಯಶಸ್ವಿಯಾಯಿತು. ಸುಪ್ರೀಂ ಕೋರ್ಟ್ ಕೂಡ, ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಕೈಗೊಳ್ಳಲು ಯಾವುದೇ ರಾಜ್ಯದ ಅನುಮತಿ ಬೇಕಿಲ್ಲ. ಈ ಯೋಜನೆಯನ್ನು ಕೈಗೊಳ್ಳಬಹುದು ಎಂದು ಹೇಳಿತು. ಇದೇ ಉತ್ತರವನ್ನು ಕೇಂದ್ರ ಸರ್ಕಾರವೂ ಸದನದಲ್ಲಿ ತಿಳಿಸಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular