ಆನೆ ದಾಳಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತನಿಗೆ ಸಾಂತ್ವನ ಹೇಳಬೇಕಾದ ಅಧಿಕಾರಿಯೊಬ್ಬರು, “ಖರ್ಚಿಗೆ ಒಂದಿಷ್ಟು ಕೊಡಿ, ಜಾಸ್ತಿ ಹಾನಿ ಎಂದು ಬರೆಯುತ್ತೇನೆ” ಎಂದು ಲಂಚಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಏನಿದು ಪ್ರಕರಣ
ಆನೆ ದಾಳಿಯಿಂದ ಅಡಿಕೆ ಮತ್ತು ಬಾಳೆ ಬೆಳೆ ನಾಶವಾಗಿರುವ ಬಗ್ಗೆ ವರದಿ ಸಿದ್ಧಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ರೈತನ ಜಮೀನಿಗೆ ಭೇಟಿ ನೀಡಿದ್ದರು. ರೈತನ ಬಳಿ ಲಂಚ ಕೇಳಿದ ಅಧಿಕಾರಿ, “ನೀವು ಖರ್ಚಿಗೆ ಏನಾದರೂ ಕೊಟ್ಟರೆ ನಾನು ಬೆಳೆ ಹಾನಿ ಸಂಖ್ಯೆಯನ್ನು ಜಾಸ್ತಿ ಬರೆಯುತ್ತೇನೆ. ಏನೂ ಕೊಡದಿದ್ದರೆ ಎಷ್ಟಿದೆಯೋ ಅಷ್ಟೇ ಬರೆಯುತ್ತೇನೆ” ಎಂದು ಮುಕ್ತವಾಗಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನೆಟ್ಟಿಗರ ಆಕ್ರೋಶ: ರವಿ ಕೀರ್ತಿ ಗೌಡ ಎಂಬವರು ಈ ವಿಡಿಯೋವನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಟ್ಯಾಗ್ ಮಾಡಿದ್ದಾರೆ. “ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ರೈತನ ಬಳಿ ಲಂಚ ಕೇಳಲು ಇವನಿಗೆ ನಾಚಿಕೆಯಾಗುವುದಿಲ್ಲವೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಸೋರಿಕೆಯಾದ ವಿಡಿಯೋ: ಅಧಿಕಾರಿಯ ಈ ಲಂಚದ ಬೇಡಿಕೆಯನ್ನು ರೈತ ರಹಸ್ಯವಾಗಿ ಚಿತ್ರೀಕರಿಸಿದ್ದು, ಇದೀಗ ಅದು ಇಲಾಖೆಯ ಭ್ರಷ್ಟಾಚಾರವನ್ನು ಬಯಲು ಮಾಡಿದೆ. ಹೆಚ್ಚಿನ ಪರಿಹಾರ ಕೊಡಿಸುವ ಆಸೆ ತೋರಿಸಿ ಸರ್ಕಾರಕ್ಕೆ ಮೋಸ ಮಾಡಲು ಪ್ರೇರೇಪಿಸಿದ ಮತ್ತು ರೈತನನ್ನು ಸುಲಿಯಲು ಯತ್ನಿಸಿದ ಈ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

