ಚಲಿಸುವ ರೈಲಿನ ಶೌಚಾಲಯದಲ್ಲಿ ದೈಹಿಕ ವಿಕಲಚೇತನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಝಾರ್ಖಂಡ್‌ನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ, ಒಡಿಶಾದಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ 28 ವರ್ಷದ ವಿಕಲಚೇತನ ಮಹಿಳೆಯೊಬ್ಬರು ಮಧ್ಯರಾತ್ರಿ 2 ರಿಂದ 3 ಗಂಟೆಯ ಸುಮಾರಿಗೆ ತಮ್ಮ ಆಸನದಿಂದ ಎದ್ದು ಶೌಚಾಲಯಕ್ಕೆ ಹೋಗಿದ್ದಾರೆ. ಇದೇ ವೇಳೆ, ರಾಮ್‌ಜೀತ್ ಎಂಬ ಪ್ಯಾಂಟ್ರಿ ಕಾರ್ ನೌಕರ ಆಕೆಯ ಹಿಂದೆಯೇ ಶೌಚಾಲಯಕ್ಕೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ರೈಲಿನಲ್ಲಿದ್ದ ಯುವಕರಿಂದ ಮಹಿಳೆ ರಕ್ಷಣೆ
ಸಂತ್ರಸ್ತ ಮಹಿಳೆಯ ಪ್ರಕಾರ, ಆರೋಪಿ ರಾಮ್‌ಜೀತ್ ಆಕೆಯೊಂದಿಗೆ ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾನೆ. ಶೌಚಾಲಯದಿಂದ ವಿಚಿತ್ರ ಶಬ್ದ ಕೇಳಿದ ಇಬ್ಬರು ಯುವ ಪ್ರಯಾಣಿಕರು ತಕ್ಷಣವೇ ಶೌಚಾಲಯದ ಬಾಗಿಲನ್ನು ಬಲವಂತವಾಗಿ ತೆರೆದಿದ್ದಾರೆ. ಆಗ ಒಳಗಡೆ ನಡೆಯುತ್ತಿದ್ದ ಕೃತ್ಯವನ್ನು ಕಂಡು ಎಲ್ಲರೂ ಆಘಾತಗೊಂಡಿದ್ದಾರೆ. ತಕ್ಷಣವೇ ಯುವಕರು ಮಧ್ಯಪ್ರವೇಶಿಸಿ ಮಹಿಳೆಯನ್ನು ಆರೋಪಿಯಿಂದ ರಕ್ಷಿಸಿದ್ದಾರೆ.
ಘಟನೆಯ ದೂರು ಸ್ವೀಕರಿಸಿದ ರೈಲ್ವೆ ಪೊಲೀಸರು, ರೈಲು, ನಿಲ್ದಾಣ ತಲುಪುತ್ತಿದ್ದಂತೆ ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.