2026ರ ಆಗಸ್ಟ್ 12ರಂದು ಅಪರೂಪದ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದ್ದು, ಕೆಲ ದೇಶಗಳಲ್ಲಿ ಹಗಲಿನಲ್ಲೇ ಕೆಲ ನಿಮಿಷಗಳ ಕಾಲ ಕತ್ತಲೆ ಆವರಿಸಿದ ಅನುಭವ ಉಂಟಾಗಲಿದೆ. ಈ ಖಗೋಳ ವಿದ್ಯಮಾನವು ಯುರೋಪ್, ಅಟ್ಲಾಂಟಿಕ್ ಪ್ರದೇಶ ಹಾಗೂ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಗೋಚರಿಸಲಿದ್ದು, ಭಾರತದಲ್ಲಿ ಮಾತ್ರ ಕಾಣಿಸುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
2026ರ ಅತ್ಯಂತ ಮಹತ್ವದ ಖಗೋಳ ಘಟನೆಯಾದ ಸಂಪೂರ್ಣ ಸೂರ್ಯಗ್ರಹಣ ಆಗಸ್ಟ್ 12ರಂದು ಸಂಭವಿಸಲಿದೆ. ಈ ವರ್ಷದ ಕೊನೆಯ ಸೂರ್ಯಗ್ರಹಣ ಇದಾಗಿದ್ದು, ಈ ಕುರಿತು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ NASA ಮಾಹಿತಿ ನೀಡಿದೆ.
ಸಂಪೂರ್ಣ ಸೂರ್ಯಗ್ರಹಣ ಎಂದರೆ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ನೇರವಾಗಿ ಬಂದು, ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಮುಚ್ಚುವ ಸಂದರ್ಭ. ಇದರಿಂದ ಭೂಮಿಯ ಕೆಲವು ಭಾಗಗಳಲ್ಲಿ ಕೆಲಕಾಲ ಸೂರ್ಯನ ಬೆಳಕು ಕಾಣಿಸದೆ ಕತ್ತಲೆ ಆವರಿಸಿದಂತೆ ಕಾಣುತ್ತದೆ.
ಈ ಬಾರಿ ಆಗಸ್ಟ್ 12ರಂದು ಸಂಭವಿಸುವ ಸಂಪೂರ್ಣ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಅಟ್ಲಾಂಟಿಕ್ ಮಹಾಸಾಗರದ ಭಾಗಗಳು, ಯುರೋಪಿನ ಕೆಲವು ದೇಶಗಳು ಹಾಗೂ ಇತರೆ ಪ್ರದೇಶಗಳಲ್ಲಿ ಈ ಅಪರೂಪದ ದೃಶ್ಯವನ್ನು ವೀಕ್ಷಿಸಬಹುದು. ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ದಿಕ್ಕಿನ ಕೆಲವು ಪ್ರದೇಶಗಳ ಜನರು ಗ್ರಹಣವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.
ತಜ್ಞರ ಪ್ರಕಾರ, ಈ ಸೂರ್ಯಗ್ರಹಣ ಹಲವು ಕಾರಣಗಳಿಂದ ವಿಶೇಷವಾಗಿದೆ. ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಸಂಪೂರ್ಣ ಸೂರ್ಯಗ್ರಹಣ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ಸುಮಾರು ಆರು ನಿಮಿಷಗಳವರೆಗೆ ಗ್ರಹಣದ ಪರಿಣಾಮ ಕಂಡುಬರಲಿದ್ದು, ಅದರಲ್ಲೂ ಸುಮಾರು 23 ಸೆಕೆಂಡುಗಳ ಕಾಲ ಸಂಪೂರ್ಣ ಕತ್ತಲೆ ಆವರಿಸಿದ ಅನುಭವವಾಗಲಿದೆ. ಹೀಗಾಗಿ ಮಧ್ಯಾಹ್ನವೇ ರಾತ್ರಿ ಆದಂತ ಅನುಭವ ಜನರಿಗೆ ದೊರೆಯಲಿದೆ.
ವಿಶೇಷವಾಗಿ Saudi Arabia ಹಾಗೂ United Arab Emirates ನಲ್ಲಿ ಕೆಲವು ನಿಮಿಷಗಳ ಕಾಲ ಹಗಲಿನಲ್ಲೇ ಕತ್ತಲೆ ಆವರಿಸುವ ಅಪರೂಪದ ದೃಶ್ಯ ಕಂಡುಬರುವ ಸಾಧ್ಯತೆ ಇದೆ.ಇನ್ನು ಈ ಸಂಪೂರ್ಣ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ, ಇಲ್ಲಿ ಸೂತಕ ಕಾಲ ಅಥವಾ ಗ್ರಹಣ ಸಂಬಂಧಿತ ಆಚರಣೆಗಳನ್ನು ಪಾಲಿಸುವ ಅಗತ್ಯವಿಲ್ಲ ಎಂದು ಕೆಲವು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಇದರ ಯಾವುದೇ ನೇರ ಪರಿಣಾಮ ಭಾರತ ಮೇಲೆ ಇರುವುದಿಲ್ಲ ಎನ್ನಲಾಗಿದೆ.
ಸೂಚನೆ: ಈ ಮಾಹಿತಿಯಲ್ಲಿನ ಕೆಲವು ಅಂಶಗಳು ಧಾರ್ಮಿಕ ನಂಬಿಕೆಗಳು ಮತ್ತು ಪಂಡಿತರ ಅಭಿಪ್ರಾಯಗಳ ಆಧಾರದ ಮೇಲೆ ನೀಡಲಾಗಿದೆ. ಇವುಗಳಿಗೆ ವೈಜ್ಞಾನಿಕ ಆಧಾರಗಳಿರುವುದಿಲ್ಲ. ಓದುಗರು ಇದನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು.

