HomeLatest Newsಫುಟ್‌ಪಾತ್ ಜನರದ್ದು, ಒತ್ತುವರಿ ಸಹಿಸಲ್ಲ: ಜುಲೈ 1 ಡೆಡ್‌ಲೈನ್ ನೀಡಿ ಕೃಷ್ಣಭೈರೇಗೌಡ ಖಡಕ್ ಎಚ್ಚರಿಕೆ

ಫುಟ್‌ಪಾತ್ ಜನರದ್ದು, ಒತ್ತುವರಿ ಸಹಿಸಲ್ಲ: ಜುಲೈ 1 ಡೆಡ್‌ಲೈನ್ ನೀಡಿ ಕೃಷ್ಣಭೈರೇಗೌಡ ಖಡಕ್ ಎಚ್ಚರಿಕೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನು ಮುಂದೆ ಪಾದಚಾರಿ ಮಾರ್ಗಗಳನ್ನು ಕಬ್ಜಾ ಮಾಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಟ್ಟರೆ ಸರ್ಕಾರ ಸುಮ್ಮನಿರಲ್ಲ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಫುಟ್‌ಪಾತ್‌ಗಳನ್ನು ತೆರವುಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಅವರು ಜುಲೈ 1, 2026 ರ ಗಡುವು ನೀಡಿದ್ದಾರೆ.

ಬುಧವಾರ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಸಂಚಾರ ಪೊಲೀಸ್ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವರು, ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ” ಆರಂಭಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಒಂದು ವೇಳೆ ಜುಲೈ 1 ರೊಳಗೆ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವು ಮಾಡದಿದ್ದರೆ ಬಿಬಿಎಂಪಿ/ಜಿಬಿಎ ವತಿಯಿಂದಲೇ ಬುಲ್ಡೋಜರ್ ಮೂಲಕ ತೆರವುಗೊಳಿಸಿ, ದುಬಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ನಡೆಸಿದ ಹೈ-ಲೆವೆಲ್ ಸಭೆಯ ಪ್ರಮುಖ ಮುಖ್ಯಾಂಶಗಳು

ಜುಲೈ 1 ರಿಂದ ಮಹಾ ಅಭಿಯಾನ:

ನಗರದ ಸುಮಾರು 2,000 ಕಿ.ಮೀ ಆದ್ಯತೆಯ (Arterial & Sub-Arterial) ರಸ್ತೆಗಳಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಬೋರ್ಡ್‌ಗಳು, ಸಾಮಗ್ರಿಗಳು ಹಾಗೂ ಅಕ್ರಮ ನಿರ್ಮಾಣಗಳನ್ನು ಆಂದೋಲನ ಮಾದರಿಯಲ್ಲಿ ತೆರವುಗೊಳಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫುಟ್‌ಪಾತ್ ದುರಸ್ತಿಗೆ ₹70 ಕೋಟಿ:

ಬೆಂಗಳೂರಿನ 5 ಪಾಲಿಕೆಗಳ ವ್ಯಾಪ್ತಿಯ ಫುಟ್‌ಪಾತ್‌ಗಳಲ್ಲಿನ ಸ್ಲ್ಯಾಬ್‌ಗಳು, ಕರ್ಬ್ ಸ್ಟೋನ್‌ಗಳು ಹಾಗೂ ಲೆವೆಲ್ ವ್ಯತ್ಯಾಸಗಳನ್ನು ಸರಿಪಡಿಸಲು ಭರ್ಜರಿ ₹70 ಕೋಟಿ ಅನುದಾನ ಮೀಸಲಿಡಲಾಗಿದೆ.

ತಳ್ಳುಗಾಡಿ ವ್ಯಾಪಾರಕ್ಕೆ ಬ್ರೇಕ್:

ಜುಲೈ 1 ರಿಂದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ತಳ್ಳುಗಾಡಿಗಳ ಮೂಲಕ ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ನಿಯಮ ಉಲ್ಲಂಘಿಸಿದರೆ ಗಾಡಿಗಳನ್ನು ಸೀಜ್ ಮಾಡಲಾಗುವುದು. ಕೇವಲ ಅನುಮತಿತ ಪ್ರದೇಶಗಳಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶವಿರಲಿದೆ.

ವಾರಸುದಾರರಿಲ್ಲದ ವಾಹನಗಳು ಹರಾಜು:

ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿರುವ ವಾಹನಗಳಿಗೆ ಜುಲೈ 1 ರಿಂದ ನೋಟಿಸ್ ಸ್ಟಿಕ್ಕರ್ ಅಂಟಿಸಲಾಗುವುದು. 7 ದಿನಗಳೊಳಗೆ ವಾಹನ ತೆರವು ಮಾಡದಿದ್ದರೆ, ಜುಲೈ 10 ರಿಂದ ಟೋಯಿಂಗ್ ಮಾಡಿ ನೇರವಾಗಿ ಹರಾಜು (Auction) ಹಾಕಲಾಗುವುದು!

ಸಿಗ್ನಲ್‌ನಿಂದ 75 ಮೀಟರ್ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್:

ನಗರದ ಯಾವುದೇ ಟ್ರಾಫಿಕ್ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್ ಸ್ಟಾಪ್ ಅಥವಾ ಇತರೆ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಸಿಗ್ನಲ್ ಬಳಿ ಇರುವ ಅನಗತ್ಯ ಹಂಪ್‌ಗಳನ್ನು ಕೂಡ ತೆರವುಗೊಳಿಸಲು ಸೂಚಿಸಲಾಗಿದೆ.

ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚಲು ₹77 ಕೋಟಿ:

ಜಂಕ್ಷನ್‌ಗಳ ಬಳಿ ರಸ್ತೆ ಗುಂಡಿಗಳನ್ನು ಮುಚ್ಚಲು ₹77 ಕೋಟಿ ಮೀಸಲಿಡಲಾಗಿದ್ದು, ಇನ್ಮುಂದೆ ಕೇವಲ ಮಣ್ಣು ತುಂಬುವುದಲ್ಲ, ಬದಲಾಗಿ ‘ಬಾಕ್ಸ್ ಕಟಿಂಗ್’ ವಿಧಾನದ ಮೂಲಕ ಆಧುನಿಕ ಯಂತ್ರಗಳನ್ನು ಬಳಸಿ ವೈಜ್ಞಾನಿಕವಾಗಿ ಡಾಂಬರೀಕರಣ ಮಾಡಲು ಸಚಿವರು ಆದೇಶಿಸಿದ್ದಾರೆ.

ಫುಟ್‌ಪಾತ್ ಪಾರ್ಕಿಂಗ್ ಮಾಡಿದ್ರೆ ಮುಲಾಜಿಲ್ಲದೆ ಟೋಯಿಂಗ್

ಸಭೆಯ ಬಳಿಕ ಮಾತನಾಡಿದ ಸಚಿವರು, “ಬೆಂಗಳೂರಿನಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಸಾಯುವ 1,000 ಜನರ ಪೈಕಿ ಶೇ. 30 ರಷ್ಟು ಪಾದಚಾರಿಗಳೇ ಆಗಿದ್ದಾರೆ. ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಫುಟ್‌ಪಾತ್‌ಗಳು ಇರೋದು ಜನರ ನಡಿಗೆಗಾಗಿಯೇ ಹೊರತು ವಾಹನ ಪಾರ್ಕಿಂಗ್ ಮಾಡಲಲ್ಲ. ನಿಯಮ ಮೀರಿದರೆ ಯಾವುದೇ ಮುಲಾಜಿಲ್ಲದೆ ಟೋಯಿಂಗ್ ಮಾಡಲಾಗುವುದು” ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಧೈರ್ಯ ತುಂಬಿರುವ ಸಚಿವರು, “ಯಾರ ಒತ್ತಡಕ್ಕೂ ಮಣಿಯಬೇಡಿ, ನಿಮ್ಮ ಬೆನ್ನಿಗೆ ನಾನಿರುತ್ತೇನೆ” ಎಂದು ಭರವಸೆ ನೀಡಿದ್ದಾರೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular