ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಕಾರ್ಡುಗಳ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಈ ಅವಕಾಶವನ್ನು ಅರ್ಹರು ಬಳಸಿಕೊಳ್ಳುವಂತಾಗಬೇಕು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ತಿತಿರ ಧರ್ಮಜ ಉತ್ತಪ್ಪ ಅವರು ತಿಳಿಸಿದ್ದಾರೆ.
ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅರ್ಹರಿಗೆ ಬಿಪಿಎಲ್ನಿಂದ ಎಪಿಎಲ್ಗೆ ಪಡಿತರ ಚೀಟಿ ವರ್ಗಾವಣೆ ಆಗಿದ್ದಲ್ಲಿ, ಆಹಾರ ಇಲಾಖೆ ಅಥವಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೆದಾರರಿಗೆ ಮನವಿ ಸಲ್ಲಿಸುವಂತಾಗಬೇಕು. ಇದರಿಂದ ಪರಿಶೀಲಿಸಿ ಪುನಃ ಬಿಪಿಎಲ್ ಕಾರ್ಡ್ ವಿತರಿಸಲಿದ್ದಾರೆ. ಆ ನಿಟ್ಟಿನಲ್ಲಿ ಆಹಾರ ಇಲಾಖೆಯವರು ಅಗತ್ಯ ಜಾಗೃತಿ ಮೂಡಿಸುವಂತೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರು ನಿರ್ದೇಶನ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಪ್ರತೀ ಫಲಾನುಭವಿಗೆ 10 ಕೆ.ಜಿ. ಅಕ್ಕಿ ವಿತರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬದ ಹಲವು ಬಡವರಿಗೆ ಎಪಿಎಲ್ ಕಾರ್ಡ್ ನೀಡಲಾಗಿದ್ದು, ಬಡವರಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರ್ಥಿಕವಾಗಿ ಸಬಲರಾಗಿದ್ದಲ್ಲಿ ಅಂತಹ ಕುಟುಂಬಗಳನ್ನು ಗ್ರಾ.ಪಂ.ಮಟ್ಟದಲ್ಲಿ ಪರಿಶೀಲಿಸಬೇಕು. ಅದನ್ನು ಬಿಟ್ಟು ನಿಜವಾದ ಬಡವರಿಗೆ ಬಿಪಿಎಲ್ ಕಾರ್ಡ್ ಇಲ್ಲದಿರುವುದು ನೋವು ತರುತ್ತಿದೆ. ಆದ್ದರಿಂದ ಅರ್ಹರಿಗೆ ಬಿಪಿಎಲ್ ಕಾರ್ಡ್ ತಲುಪಿಸಬೇಕು ಎಂದು ಸೂಚಿಸಿದರು. ಈ ಸಂಬಂಧ ಸರ್ಕಾರಕ್ಕೂ ಸಹ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನ ಮತ್ತು ಪ್ರಗತಿ ಸಂಬಂಧ ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ಆಯೋಜಿಸಲಾಗುವುದು. ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಗ್ಯಾರಂಟಿ ಯೋಜನೆ ರಾಜ್ಯ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಹೀಗೆ ಹಲವರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಸಮ್ಮೇಳನ ನಡೆದಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನಾ ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಪಂಕಜ, ಸದಸ್ಯರಾದ ಜಾನ್ಸನ್, ಕಾಂತರಾಜು ಅವರು ಮಾತನಾಡಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್, ಕೆಎಸ್ಆರ್ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಈರಸಪ್ಪ ಅವರು ತಮ್ಮ ಇಲಾಖೆಗೆ ಸಂಬಂಧಿಸದಂತೆ ಗ್ಯಾರಂಟಿ ಯೋಜನೆ ಪ್ರಗತಿ ಸಂಬಂಧ ಮಾಹಿತಿ ನೀಡಿದರು.
