ಬೆಂಗಳೂರು: ಅವಧಿಗೆ ಮೊದಲೇ ರಾಜ್ಯಕ್ಕೆ ಪ್ರವೇಶಿಸಿ ಎರಡು ದಿನಗಳ ಕಾಲ ಆರ್ಭಟಿಸಿದ ಮುಂಗಾರು ಸ್ವಲ್ಪ ಕಡಿಮೆಯಾಗಿದೆ. ಆದರೆ, ಮಳೆ ಸಂಬಂಧಿ ಅನಾಹುತಗಳಲ್ಲಿ ರಾಜ್ಯದ ವಿವಿಧ ಕಡೆ ಐದು ಜನ ಮೃತಪಟ್ಟಿದ್ದಾರೆ. ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿ ಬುಧವಾರ ಕೂಡ ಅಂಗನವಾಡಿಗಳಿಗೆ ರಜೆ ನೀಡಲಾಗಿದೆ.
ಹಾವೇರಿಯಲ್ಲಿ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದು, ಅಥಣಿಯಲ್ಲಿ ಎತ್ತಿನ ಗಾಡಿ ಮಗುಚಿ ಇಬ್ಬರು ಮಕ್ಕಳು ನೀರು ಪಾಲಾಗಿದ್ದಾರೆ. ಕೊಡಗಿನಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಬೀದರ್ ನಲ್ಲಿ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವನ್ನಪ್ಪಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಶಾಂತವ್ವ ತಳವಾರ(55) ಮೃತಪಟ್ಟಿದ್ದಾರೆ. ಕೊಡಗಿನ ಮಾಲ್ದಾರ ಗ್ರಾಮದಲ್ಲಿ ಮರದ ಕೊಂಬೆ ಬಿದ್ದು ಕಾಫಿ ಬೆಳೆಗಾರ ಪೊನ್ನಚಂಡ ವಿಷ್ಣು ಬೆಳ್ಳಿಯಪ್ಪ(64) ಮೃತಪಟ್ಟಿದ್ದಾರೆ.
ಬೀದರ ಜಿಲ್ಲೆ ಬಸವಕಲ್ಯಾಣದ ಯದಲಾಪುರ ರಸ್ತೆಯಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ಬಿದ್ದು ತಂತಿ ತುಳಿದು ಧರ್ಮಣ್ಣ ಬರಿಗಾಲೆ(48) ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲಾ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದಲ್ಲಿ ಹಳ್ಳದಲ್ಲಿ ಎತ್ತಿನಗಾಡಿ ಉರುಳಿ ಬಿದ್ದು ಗಣೇಶ ಸಂಜು ಕಾಂಬಳೆ(9), ದೀಪಕ್ ಸಂಜು ಕಾಂಬಳೆ(11) ಎಂಬ ಮಕ್ಕಳು ನೀರು ಪಾಲಾಗಿದ್ದಾರೆ.
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಅಂಗನವಾಡಿಗಳಿಗೆ ಬುಧವಾರವೂ ರಜೆ ನೀಡಲಾಗಿದೆ.