ಚಿಕ್ಕಮಗಳೂರು: ವಿವಿಧ ಜಿಲ್ಲೆಗಳಲ್ಲಿ ಜಾನುವಾರುಗಳನ್ನು ಕಳವು ಮಾಡುತ್ತಿದ್ದ ತಂಡವನ್ನು ಕಳಸ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಮೂಲದ ಸಲ್ಮಾನ್ ಖಾನ್, ಸಾಹಿಲ್, ಸೈಯದ್ ತೌಫಿಕ್, ಅಬ್ದುಲ್ ಅಜೀಜ್ ಮತ್ತು ಅಬ್ದುಲ್ ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 10ರಂದು ಕಳಸ -ಹೊರನಾಡು ರಸ್ತೆಯ ದಾರಿಮನೆಯ ಸಮೀಪ ಜಾನುವಾರು ಸಾಗಿಸುವ ವಾಹನವನ್ನು ಪೊಲೀಸರು ಬೆನ್ನಟ್ಟಿದ್ದರು. ಈ ವೇಳೆ ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದರು. ವಾಹನ ಸಹಿತ ನಾಲ್ಕು ಜಾನುವಾರುಗಳನ್ನು ಕಳಸ ಪೊಲೀಸರು ವಶಕ್ಕೆ ಪಡೆದಿದ್ದರು.
ಪರಾರಿಯಾಗಿದ್ದವರ ಪತ್ತೆಗೆ ಕಳಸ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಗಿರೀಶ್, ಶಿವಕುಮಾರ್, ನಿಖಿಲ್, ಸಿದ್ದಪ್ಪ ಕೆರಂಡಿ, ಪ್ರಮೋದ್, ವಿನಯ್ ಕಾರ್ಯಾಚರಣೆ ನಡೆಸಿದ್ದರು. ಇದೀಗ ಇವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ತಂಡವು ಜಾನುವಾರು ಕಳ್ಳತನದಲ್ಲಿ ನಿರಂತರವಾಗಿ ತೊಡಗಿಕೊಂಡಿತ್ತು. ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಜಾನುವಾರುಗಳನ್ನು ಕಳವು ಮಾಡಿದೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.