ಉತ್ತರ ಕರ್ನಾಟಕ ಭಾಗದ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಒಂದಿದೆ. ಹುಬ್ಬಳ್ಳಿಯಲ್ಲಿ ಮೊಟ್ಟ ಮೊದಲಬಾರಿಗೆ ರಣಜಿ ಫೈನಲ್ ಪಂದ್ಯ ನಡೆಯುತ್ತಿದೆ.
ಈ ಕುರಿತು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಫೆಬ್ರವರಿ 24ರಂದು ನಮ್ಮ ಹುಬ್ಬಳ್ಳಿಯ ರಾಜ್ ನಗರದ KSCA ಮೈದಾನದಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವೆ ಐತಿಹಾಸಿಕ ರಣಜಿ ಫೈನಲ್ ಪಂದ್ಯ ನಡೆಯಲಿದೆ’ ಎಂದು ಹೇಳಿದ್ದಾರೆ.
‘ಅತ್ಯಂತ ಸುಸಜ್ಜಿತವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವಾಗಿರುವ ನಮ್ಮ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ ನಡೆಯುತ್ತಿರುವದು ಹೆಮ್ಮೆಯ ವಿಷಯ’ ಎಂದು ತಿಳಿಸಿದ್ದಾರೆ.
‘ಇಂದು KSCA ಸೆಕ್ರೆಟರಿ ಶ್ರೀ ಸಂತೋಷ ಮೆನನ್, ಶ್ರೀ ಅವಿನಾಶ ವೈದ್ಯ KSCA MC ಸದಸ್ಯ, ಶ್ರೀ ವೀರಣ್ಣಾ ಸವಡಿ KSCA ಧಾರವಾಡ ವಲಯದ ಸಂಚಾಲಕರು ಮತ್ತು KSCA ಧಾರವಾಡ ವಲಯದ ಚೇರಮನ್ ಅವರು ಇಂದು ನನ್ನನ್ನು ಭೇಟಿ ಮಾಡಿ ಫೈನಲ್ ಪಂದ್ಯದ ತಯಾರಿ ಕುರಿತು ವಿವರಿಸಿದರು. ಅವಳಿ ನಗರದ ಕ್ರಿಕೆಟ್ ಪ್ರೇಮಿಗಳಿಗೆ ಫೈನಲ್ ವೀಕ್ಷಿಸುವ ಸುವರ್ಣಾವಕಾಶ ದೊರೆಯಲಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಫೈನಲ ಪಂದ್ಯ ವಿಕ್ಷೀಣೆಗೆ ಸ್ವಾಗತ ಬಯಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದಾರೆ.
‘ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆಗೆ ನಾವು ಸತತವಾಗಿ ಪ್ರಯತ್ನಿಸುತ್ತಿದ್ದು, ಈ ಫೈನಲ್ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವದು ಸಂತೋಷದ ವಿಷಯ. ಈ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಮಟ್ಟಕ್ಕೆ ಏರಿಸಲು ನಾವು ಪ್ರಯತಿಸುತ್ತಿದ್ದೆವೆ. ಫೈನಲ್ ಪಂದ್ಯ ಆಡುತ್ತಿರುವ ಎರಡು ತಂಡಗಳಿಗೂ ಶುಭಾಶಯಗಳು’ ಎಂದು ಹೇಳಿದ್ದಾರೆ.
ರಣಜಿ ಫೈನಲ್ ಪಂದ್ಯ: ದೇವದತ್ ಪಡಿಕ್ಕಲ್ ಕರ್ನಾಟಕ ಬಳಗ ಉತ್ತರಾಖಂಡ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ 11 ವರ್ಷಗಳ ಬಳಿಕ ರಣಜಿ ಟ್ರೋಪಿಯ ಫೈನಲ್ ತಲುಪಿದೆ. ಹುಬ್ಬಳ್ಳಿಯಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ಜಮ್ಮು ಕಾಶ್ಮೀರ ತಂಡವನ್ನು ಕರ್ನಾಟಕ ಎದುರಿಸಲಿದೆ.
ಫೈನಲ್ ಪಂದ್ಯಕ್ಕೆ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್, ವಿಜಯಕುಮಾರ್ ವೈಶಾಕ್ ತಂಡದಲ್ಲಿದ್ದಾರೆ.
ರಣಜಿ ಫೈನಲ್ ತಲುಪಿರುವ ಕರ್ನಾಟಕ ತಂಡ 9ನೇ ಟ್ರೋಫಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿದೆ. ಜಮ್ಮು ಕಾಶ್ಮೀರ ತಂಡ ಚೊಚ್ಚಲ ಟ್ರೋಫಿ ಗೆಲುವಿನ ಉತ್ಸಾಹದಲ್ಲಿದೆ. ಮೊದಲ ಬಾರಿಗೆ ಫೈನಲ್ ಪಂದ್ಯ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯಲಿದೆ.

