ಚಿಕ್ಕಮಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಬಿಟ್ಟು ಹೋಗಿದ್ದಕ್ಕೆ ಬೇಸತ್ತ ವ್ಯಕ್ತಿಯೊಬ್ಬ ತನ್ನ ಮಗಳು ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ರಾತ್ರಿ ಚಿಕ್ಕಮಗಳೂರು ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ಘಟನೆ ನಡೆದಿದೆ.
ಮೌಲ್ಯ(7), ಜ್ಯೋತಿ(47), ಸಿಂಧು(27) ಕೊಲೆಯಾದವರು. ರತ್ನಾಕರ್(40) ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿನಾಶ್(33) ಎಂಬುವರ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳಸ ಮೂಲದ ರತ್ನಾಕರ್ ಸಂಗಮೇಶ್ವರ ಪೇಟೆ ಖಾಸಗಿ ಶಾಲೆಯ ಬಸ್ ಚಾಲಕನಾಗಿದ್ದು, ಮಾಗಲು ಗ್ರಾಮದ ಸ್ವಾತಿ ಮದುವೆಯಾಗಿದ್ದ. ಈತನಿಗೆ ಮೌಲ್ಯ ಎಂಬ ಪುತ್ರಿ ಇದ್ದಾರೆ. ಎರಡು ವರ್ಷದ ಹಿಂದೆ ಪತ್ನಿ ಬಿಟ್ಟು ಹೋಗಿದ್ದರು. ರತ್ನಾಕರ ಮಗಳನ್ನು ತಾನೆ ನೋಡಿಕೊಳ್ಳುತ್ತಿದ್ದ. ಮಗಳಿಗೆ ಆಕೆಯ ಸಪಾಠಿಗಳು ನಿನ್ನ ಅಮ್ಮ ಎಲ್ಲಿ ಎಂದು ಕೇಳುತ್ತಿದ್ದರು. ಹೀಗಾಗಿ ಪುತ್ರಿ ತಾಯಿಯನ್ನು ತೋರಿಸು ಎಂದು ತಂದೆಗೆ ಕೇಳಿದ್ದಳು. ಮದುವೆ ಫೋಟೋ ಆಲ್ಬಮ್ ನಿಂದ ಫೋಟೋ ತೆಗೆದುಕೊಂಡು ಹೋಗಿ ಎಲ್ಲರಿಗೂ ತೋರಿಸಿದ್ದಳು. ಇದರಿಂದ ತೀವ್ರ ನೋವಾಗಿತ್ತು ಎಂದು ಮೂವರನ್ನು ಕೊಲೆ ಮಾಡಿದ ಬಳಿಕ ಸೆಲ್ಫಿ ವಿಡಿಯೋ ಮಾಡಿ ರತ್ನಾಕರ್ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾನೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ರತ್ನಾಕರ್ ಮಗಳನ್ನು ತನ್ನ ಅತ್ತೆಯ ಮನೆಯವರು ಮಾಗಲು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ರಾತ್ರಿ 10 ಗಂಟೆ ವೇಳೆಗೆ ಬಂದೂಕು ಸಹಿತ ಅತ್ತೆಯ ಮನೆಗೆ ತೆರಳಿದ ರತ್ನಾಕರ್ ತನ್ನ ಪುತ್ತಿ, ಅತ್ತೆ, ನಾದಿನಿ ಹಾಗೂ ನಾದಿನಿಯ ಪತಿಗೆ ಗುಂಡು ಹಾರಿಸಿದ್ದಾನೆ.
ಮಗಳು ಮೌಲ್ಯ, ಅತ್ತೆ ಜ್ಯೋತಿ, ನಾದಿನಿ ಸಿಂಧು ಸ್ಥಳದಲ್ಲೇ ಮೃತಪಟ್ಟಿದ್ದು, ನಾದಿನಿಯ ಪತಿ ಅವಿನಾಶ್ ಪಾರಾಗಿದ್ದಾರೆ. ಎಲ್ಲರಿಗೂ ಗುಂಡು ಹಾರಿಸಿದ ನಂತರ ರತ್ನಾಕರ್ ತಾನು ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.