ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ಯಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆದರೆ ಯಾವುದೇ ಹೆಸರು ಉಲ್ಲೇಖವಾಗಿಲ್ಲ.
ಮೃತ ಅಂಥೋಣಿಸ್ವಾಮಿ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬಿಎನ್ಎಸ್ ಸೆಕ್ಷನ್ 103(1)ರಡಿ ಕೇಸ್ ಮಾಡಲಾಗಿದೆಯಾದರೂ ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಅಂತಾ ಮೊಕದ್ದಮೆ ದಾಖಲಿಸಿರೋದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
ಹಸುಗಳನ್ನು ಹುಡುಕಿಕೊಂಡು ಅರಣ್ಯಕ್ಕೆ ಹೋಗಿದ್ದಾಗ ಕೊಲೆ ಎಂದು ಮೃತ ಅಂಥೋಣಿಸ್ವಾಮಿ ಪತ್ನಿ ಲೂರ್ದಾಮೇರಿ ದೂರು ನೀಡಿದ್ದರು.
ಇನ್ನೊಂದೆಡೆ ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹನೂರು ಪೊಲೀಸ್ ಠಾಣೆ ಎದುರು ಕುಟುಂಬದವರು ಹಾಗೂ ಸ್ಥಳೀಯರು ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ. ಮೂವರನ್ನು ಹತ್ಯೆಗೈದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಹತ್ಯೆಯಾದವರ ಕುಟುಂಬ ಸದಸ್ಯರು, ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ.
ಪ್ರಾಣಿ ಬೇಟೆಗೆ ಬಂದಿದ್ದಾರೆಂದು ಭಾವಿಸಿ ಅರಣಾಧ್ಯಿಕಾರಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದರು. ಮೃತರನ್ನು ಕುಮಾರ್,, ಪೀಟರ್, ಅಂಥೋಣಿ ಸ್ವಾಮಿ ಎಂದು ಗುರುತಿಸಲಾಗಿದೆ. ಮೃತ ಆಥೋಣಿಸಾಮಿ ಪತ್ನಿ ಲೂರ್ದಾಮೇರಿ ದೂರಿನ ಆಧಾರದಲ್ಲಿ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ವಲಯ ಐಜಿ ಬೋರಲಿಂಗೇಗೌಡ, ಚಾಮರಾಜನಗರ ಎಸ್ಪಿ ಮುತ್ತುತಾಜು ಸಮ್ಮುಖದಲ್ಲಿ ಅರಣ್ಯ ಅಧಿಕಾರಿಗಳು ಹನೂರು ವಿಭಾಗ ಎಂದು ಆರೋಪಿಗಳನ್ನಾಗಿಸಿ ಕೇಸ್ ದಾಖಲಿಸಲಾಗಿದೆ. ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಎಂದು ಎಫ್ಐಆರ್ನಲ್ಲಿ ನಮೂದಿಸಲಾಗಿದೆ. ಬಿಎನ್ ಎಸ್ 103(1) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
ಅಂಥೋಣಿಸ್ವಾಮಿ ಪತ್ನಿ ದೂರಿನಲ್ಲಿ ನಾವು ಹಸು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೆವು. ಆ.14 ರಂದು ನಮ್ಮ ಹಸುಗಳು ಕಾಡಿಗೆ ಮೇಯಲು ಹೋಗಿದ್ದವು. ಅವುಗಳು ವಾಪಸ್ ಬಂದಿರಲಿಲ್ಲ.ಹಸುಗಳನ್ನು ಹುಡುಕಿಕೊಂಡು ಬರಲು ನಿನ್ನೆ ಆಗಸ್ಟ್ 14ರ ಸಂಜೆ ನನ್ನ ಪತಿ ಆಥೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್, ದೊಡ್ಡಪ್ಪನ ಮಗ ಜೋಸೆಫ್ ತೆರಳಿದ್ದರು. ಬೆಳಿಗ್ಗೆಯಾದರೂ ಅವರು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ ಜೋಸೆಫ್ ಕರೆ ಮಾಡಿ ಘಟನೆ ವಿವರಿಸಿದ. ಮರಿಯಮಂಗಲ ಗ್ರಾಮದಿಂದ 4 ಕಿಮೀ ಕಾಡಿನಲ್ಲಿ ನಾವು ವಿಶ್ರಾಂತಿ ಮಾಡುತ್ತಾ ಮಲಗಿದ್ದೆವು. ಬೆಳಿಗಿನ ಜಾವ ಸುಮಾರು 3 ರಿಂದ 5 ಗಂಟೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ರು. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟರು. ನಾನು ತಪ್ಪಿಸಿಕೊಂಡು ಬಂದೆ ಎಂದು ಜೋಸೆಫ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

