ಬೆಂಗಳೂರು: ವರ್ಗಾವಣೆ ನೀರಿಕ್ಷೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ತಾಂತ್ರಿಕ ಕಾರಣಗಳಿಂದ ಮುಂದೂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಆಗಸ್ಟ್ ಎರಡನೇ ವಾರ ಪ್ರಕಟಿಸುವ ಸಾಧ್ಯತೆ ಇದೆ.
ಪಟ್ಟಿ ಪ್ರಕಟವಾದ ತಕ್ಷಣದಿಂದಲೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಅದಾದ ತಿಂಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ಕೈಗೊಂಡಿದೆ.
ಶಾಲಾ ಶಿಕ್ಷಣ ಇಲಾಖೆಯ ಈ ಮೊದಲ ವೇಳಾಪಟ್ಟಿಯ ಪ್ರಕಾರ ಜುಲೈ 3ನೇ ವಾರದಲ್ಲಿಯೇ ವರ್ಗಾವಣೆ ಪ್ರಕ್ರಿಯೆ ಪೂರ್ಣವಾಗಬೇಕಿತ್ತು. ಆದರೆ, ರಾಜ್ಯದಲ್ಲಿ ಹೊಸದಾಗಿ 4134 ದ್ವಿಭಾಷಾ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಲಾಗಿದೆ. 5,000 ಶಾಲೆಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಿಸಲಾಗಿದೆ. ಈ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮೊದಲ ಆದ್ಯತೆ ನೀಡಿದೆ. ಹೀಗಾಗಿ 2024 -25 ನೇ ಸಾಮಾನ್ಯ ವರ್ಗಾವಣೆ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ.
ಪೂರ್ವ ಪ್ರಾಥಮಿಕ ತರಗತಿಗಳಲ್ಲಿ, ಎಲ್.ಕೆ.ಜಿ., ಯುಕೆಜಿ ಕಲಿಕೆ ಮತ್ತು ದ್ವಿಭಾಷಾ ಮಾಧ್ಯಮ ತರಗತಿಗಳಲ್ಲಿ ಮೊದಲ ಆದ್ಯತೆಯಾಗಿ ಶಿಕ್ಷಕರನ್ನು ನೀಡಬೇಕಿದೆ. ಈಗಿರುವ ವರ್ಗಾವಣೆ ಪಟ್ಟಿಯನ್ನು ಕಳೆದ ಡಿಸೆಂಬರ್ ವೇಳೆಗೆ ಲಭ್ಯವಾದ ಶಿಕ್ಷಕರು ಮತ್ತು ಅವರ ಸೇವಾ ಅಂಕ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ಒಟ್ಟಾರೆ ಎಷ್ಟು ಶಿಕ್ಷಕರು ವರ್ಗಾವಣೆ ಲಭ್ಯವಾಗುತ್ತಾರೆ ಎಂಬ ಮಾಹಿತಿ ಗೊತ್ತಾಗುತ್ತದೆ. ಹೀಗಾಗಿ ಆಗಸ್ಟ್ ಎರಡನೇ ವಾರದಲ್ಲಿ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.