ಪುತ್ತೂರು: ಮಹಿಳಾ ವೈದ್ಯಾಧಿಕಾರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಪ್ರಕರಣ ದಾಖಲಿಸಿದ್ದರೂ ಪುತ್ತೂರು ರಾಣಿ ಪೊಲೀಸರು ಆರೋಪಿ ಬಂಧಿಸಿಲ್ಲ ಎಂದು ಹೇಳಲಾಗಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪುತ್ತೂರು ಪೊಲೀಸ್ ಠಾಣೆ ಎದುರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪುತ್ತೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿಯವರ ಮೇಲೆ ಹಲ್ಲೆ ನಡೆಸಲಾಗಿದೆ. ಜೋಹಾರ್ ಮತ್ತು ಅವರ ಪುತ್ರ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಡಾ. ಆಶಾ ಜ್ಯೋತಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಠಾಣೆಗೆ ಕರೆಸಿ ವಾಪಸ್ ಕಳುಹಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಿಜೆಪಿ ಮುಖಂಡ ಅರುಣ್ ಪುತ್ತಿಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಲಾಗಿದೆ.
ಹೆರಿಗೆ ವಾರ್ಡ್ ನನಲ್ಲಿ ರೌಂಡ್ಸ್ ನಲ್ಲಿ ಇದ್ದ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ ಅವರ ಮೇಲೆ ರೋಗಿ ಫಾತಿಮಾ ಸಂಬಂಧಿಕರಾದ ಜೋಹಾರ್ ಮತ್ತು ಅವರ ಪುತ್ರ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಇಬ್ಬರೂ ರೋಗಿಗಳು ಮಲಗುವ ಮಂಚದ ಮೇಲೆ ಕುಳಿತಿದ್ದನ್ನು ವೈದ್ಯೆ ಪ್ರಶ್ನಿಸಿದ್ದರು. ಇದು ರೋಗಿಗಳನ್ನು ಭೇಟಿ ಮಾಡುವ ಸಮಯವಲ್ಲ. ನವಜಾತ ಶಿಶುಗಳು, ಬಾಣಂತಿಯರಿಗೆ ಸೋಂಕು ತಗಲುವ ಸಾಧ್ಯತೆ ಇದೆ. ವಾರ್ಡ್ ನಿಂದ ಹೊರ ಹೋಗಿ ಎಂದು ಸೂಚಿಸಿದ್ದರು.
ಈ ವೇಳೆ ವೈದ್ಯರಿಗೆ ಏರು ಧ್ವನಿಯಲ್ಲಿ ಮಾತನಾಡಿ ಅನುಚಿತ ವರ್ತನೆ ತೋರಿಸಿ ಜೋಹಾರ್ ಪುತ್ರ ಕೈಯಿಂದ ದೂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿತ್ತು. ವೈದ್ಯೆ ದೂರು ನೀಡಿದ್ದರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದು, ಆರೋಪಿಗಳ ಬಂಧನಕ್ಕೆ ಪುತ್ತೂರು ಪೊಲೀಸರಿಗೆ ಗಡುವು ನೀಡಿ ಪ್ರತಿಭಟನೆ ನಡೆಸಲಾಗಿದೆ. ಆರೋಪಿಗಳನ್ನು ಬಂಧಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.