FASTag ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಫಾಸ್ಟ್ಯಾಗ್ ವ್ಯವಸ್ಥೆಯು ಚಾಲಕರ ಸಮಯವನ್ನು ಉಳಿಸಿದೆ. ಟೋಲ್ ಶುಲ್ಕ ಪಾವತಿಸಲು ನಿಲ್ಲಿಸುವ ಮತ್ತು ಹಣ ನೀಡುವ ಅಗತ್ಯವಿರೋದಿಲ್ಲ. ಆದ್ರೆ ಸುಗಮ ಟೋಲ್ ಪಾವತಿಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಹಣ ಇಟ್ಟುಕೊಳ್ಳುವುದು ಮುಖ್ಯ. ಅಗತ್ಯಕ್ಕೆ ಅನುಗುಣವಾಗಿ ಅದನ್ನು ರೀಚಾರ್ಜ್ ಮಾಡುವುದು ಸಹ ಮುಖ್ಯ. ಫಾಸ್ಟ್ಯಾಗ್ ಬಳಕೆದಾರರು ಒಂದು ಬಾರಿ ವಿತರಣಾ ಶುಲ್ಕ, ಮರು ವಿತರಣೆ ಶುಲ್ಕ ಮತ್ತು ಭದ್ರತಾ ಠೇವಣಿ ಸೇರಿದಂತೆ ಮೂರು ರೀತಿಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಫಾಸ್ಟ್ಯಾಗ್‌ ನಲ್ಲಿ ಮೂರು ವಿಧಗಳಿವೆ :

ಟ್ಯಾಗ್ ಸೇರುವ ಶುಲ್ಕ: ಇದು ಒಂದು ಬಾರಿ ಶುಲ್ಕವಾಗಿದೆ. ನೀವು ಫಾಸ್ಟ್ಯಾಗ್ ಬಳಕೆದಾರರಾಗಿ ಹೆಸರು ನೋಂದಾಯಿಸಿದಾಗ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಇದು ನಿಮ್ಮ ವಾಹನಕ್ಕೆ ಟ್ಯಾಗ್ ಅನ್ನು ಪ್ರಾರಂಭಿಸುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ.

ಭದ್ರತಾ ಶುಲ್ಕ : ಸಣ್ಣ ಮೊತ್ತವನ್ನು ಭದ್ರತಾ ಠೇವಣಿಯಾಗಿ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಬಾಕಿ ಇಲ್ಲದಿದ್ದರೆ ಈ ಮೊತ್ತವನ್ನು ಖಾತೆ ಮುಚ್ಚುವ ಸಮಯದಲ್ಲಿ ನಿಮಗೆ ಹಿಂದಿರುಗಿಸಲಾಗುತ್ತದೆ. ನಿಮ್ಮ ವಾಹನ ಯಾವುದು ಎನ್ನುವುದರ ಮೇಲೆ ಶುಲ್ಕ ಬದಲಾಗುತ್ತದೆ.

ಮಿತಿ ಮೊತ್ತ :  ಟ್ಯಾಗ್ ಸಕ್ರಿಯಗೊಳಿಸುವ ಸಮಯದಲ್ಲಿ ಅಗತ್ಯವಿರುವ ಕನಿಷ್ಠ ರೀಚಾರ್ಜ್ ಮೊತ್ತವಾಗಿದೆ. ಸಕ್ರಿಯಗೊಳಿಸಿದ ತಕ್ಷಣ ಟೋಲ್ ಶುಲ್ಕವನ್ನು ಪಾವತಿಸಲು ಇದ್ರಿಂದ ನೆರವಾಗುತ್ತದೆ. ಮಿತಿ ಮೊತ್ತ ಕೂಡ ನಿಮ್ಮ ವಾಹನಕ್ಕೆ ತಕ್ಕಂತೆ ಬದಲಾಗುತ್ತದೆ.

ಫಾಸ್ಟ್ಯಾಗ್ ವಿತರಕರ ಪಟ್ಟಿ :

ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌ ಫಾಸ್ಟ್ಯಾಗ್‌ ಸೇರುವ ಶುಲ್ಕವಾಗಿ ಪ್ರಸ್ತುತ ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ 100 ರೂಪಾಯಿ ವಿಧಿಸುತ್ತದೆ.  ಕಾರು, ಜೀಪು, ವ್ಯಾನ್‌, ಟಾಟಾ ಏಸ್ ವಾಹನಗಳಿಗೆ ಭದ್ರತಾ ಠೇವಣಿಯಾಗಿ 100 ರೂಪಾಯಿ ವಸೂಲಿ ಮಾಡುತ್ತದೆ.

ಐಸಿಐಸಿಐ ಬ್ಯಾಂಕ್‌ ಜಿಎಸ್ಟಿ ಸೇರಿ ಫಾಸ್ಟ್ಯಾಗ್‌ ಸೇರುವ ಶುಲ್ಕ 99.12 ರೂಪಾಯಿ. ಕಾರು, ಜೀಪ್ ಮತ್ತು ವ್ಯಾನ್‌ಗಳ ಭದ್ರತಾ ಠೇವಣಿ ಮೊತ್ತ 200 ರೂಪಾಯಿಯಾಗಿದೆ. ಮಿತಿ ಮೊತ್ತ ಕೂಡ 200 ರೂಪಾಯಿಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರುಗಳು, ಜೀಪ್‌ಗಳು, ವ್ಯಾನ್‌ಗಳು, ಟಾಟಾ ಆಕ್ಸಸ್ ಮತ್ತು ಇತರ ಕಾಂಪ್ಯಾಕ್ಟ್ ಲಘು ವಾಣಿಜ್ಯ ವಾಹನಗಳಿಗೆ ಯಾವುದೇ ಟ್ಯಾಗ್ ಶುಲ್ಕ ಅಥವಾ ಭದ್ರತಾ ಠೇವಣಿ ವಿಧಿಸುವುದಿಲ್ಲ. ಫಾಸ್ಟ್ಯಾಗ್ ಸಕ್ರಿಯಗೊಳಿಸಲು ಕನಿಷ್ಠ 200 ರೂಪಾಯಿ ವಿಧಿಸುತ್ತದೆ.

ಇನ್ನು ಆಕ್ಸಿಸ್ ಬ್ಯಾಂಕ್ ಫಾಸ್ಟ್ಯಾಗ್‌ಗೆ ಸೇರಲು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಮರು ವಿತರಣೆಗಾಗಿ ಬ್ಯಾಂಕ್ ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ 100 ರೂಪಾಯಿ ಪಡೆಯುತ್ತದೆ. ಕಾರ್, ಜೀಪ್ ಮತ್ತು ವ್ಯಾನ್‌ಗಳಂತಹ ವಾಹನಗಳಿಗೆ ಭದ್ರತಾ ಠೇವಣಿಯಾಗಿ 200 ರೂಪಾಯಿ  ವಿಧಿಸುತ್ತದೆ.

ಬ್ಯಾಂಕ್‌ ಆಫ್‌ ಬರೋಡಾ ಫಾಸ್ಟ್ಯಾಗ್‌ ಸೇರಲು 150 ರೂಪಾಯಿ ಶುಲ್ಕ ವಿಧಿಸುತ್ತದೆ. ಭದ್ರತಾ ಠೇವಣಿ ಮೊತ್ತವು ವಾಹನದ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಕಾರು, ಜೀಪ್ ಮತ್ತು ವ್ಯಾನ್‌ಗಳಿಗೆ 200 ರೂಪಾಯಿ ಭದ್ರತಾ ಠೇವಣಿ ಶುಲ್ಕ ಹಾಗೂ 200 ರೂಪಾಯಿಗಳ ಮಿತಿ ಮೊತ್ತ ವಿಧಿಸುತ್ತದೆ.

ಕೆನರಾ ಬ್ಯಾಂಕ್ ಟ್ಯಾಗ್‌ ನೀಡಿಕೆ ಮತ್ತು ಮರು ವಿತರಣೆ ಎರಡಕ್ಕೂ 100 ರೂಪಾಯಿ ಚಾರ್ಜ್‌ ಮಾಡುತ್ತದೆ. ಕಾರು, ಜೀಪ್ ಮತ್ತು ವ್ಯಾನ್‌ಗಳಂತಹ ವಾಹನಗಳಿಗೆ ಭದ್ರತಾ ಠೇವಣಿ ಮೊತ್ತ 200 ರೂಪಾಯಿ ಹಾಗೂ ಮಿತಿ ಮೊತ್ತ 100 ರೂಪಾಯಿ ಆಗಿದೆ.

ಐಡಿಬಿಐ ಬ್ಯಾಂಕ್ ತೆರಿಗೆಗಳನ್ನು ಒಳಗೊಂಡಂತೆ 100 ರೂಪಾಯಿಗಳ ಮರು ವಿತರಣೆ ಶುಲ್ಕವನ್ನು ವಿಧಿಸುತ್ತದೆ. ಬ್ಯಾಂಕ್ 200 ರೂಪಾಯಿ ಟ್ಯಾಗ್ ಠೇವಣಿ ಶುಲ್ಕವನ್ನು ವಿಧಿಸುತ್ತದೆ ಮತ್ತು ಯಾವುದೇ ಮಿತಿ ಮೊತ್ತವನ್ನು ವಸೂಲಿ ಮಾಡುವುದಿಲ್ಲ.

ಕೋಟಕ್ ಮಹೀಂದ್ರಾ ಬ್ಯಾಂಕ್ ಟ್ಯಾಗ್ ಸೇರುವ ಶುಲ್ಕವಾಗಿ 100 ರೂಪಾಯಿ ಪಡೆಯುತ್ತದೆ. ಭದ್ರತೆಯಾಗಿ 200 ರೂಪಾಯಿ ಪಡೆಯುತ್ತದೆ. ಮಿತಿ ಮೊತ್ತ ವಸೂಲಿ ಮಾಡುವುದಿಲ್ಲ.

ಇಂಡಸ್‌ಇಂಡ್ ಬ್ಯಾಂಕ್ 200 ರೂಪಾಯಿ ಭದ್ರತಾ ಠೇವಣಿಯಾಗಿ ತೆಗೆದುಕೊಳ್ಳುತ್ತದೆ. ಗ್ರಾಹಕರ ವ್ಯಾಲೆಟ್‌ಗೆ 200 ರೂಪಾಯಿ ಮಿತಿಯನ್ನು ಕ್ರೆಡಿಟ್ ಮಾಡುತ್ತದೆ. ಟ್ಯಾಗ್ ಸೇರುವ ಶುಲ್ಕವಾಗಿ 100 ರೂಪಾಯಿ ವಸೂಲಿ ಮಾಡುತ್ತದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಕಾರು, ಜೀಪ್‌ ಮತ್ತು ವ್ಯಾನ್‌ಗಳಂತಹ ವಾಹನಗಳಿಗೆ 200 ರೂಪಾಯಿ ಭದ್ರತಾ ಠೇವಣಿ ತೆಗೆದುಕೊಳ್ಳುತ್ತದೆ. ಮಿತಿ ಮೊತ್ತವು 100 ರೂಪಾಯಿ ಆಗಿದೆ.

ಏರ್ಟೆಲ್ ಪಾವತಿ ಬ್ಯಾಂಕ್ ಫಾಸ್ಟ್ಯಾಗ್‌ನಲ್ಲಿ ಜಿಎಸ್‌ಟಿ ಸೇರಿದಂತೆ  99.99 ರೂಪಾಯಿ ಸೇರುವಿಕೆ ಶುಲ್ಕವನ್ನು ವಿಧಿಸುತ್ತದೆ. ಕಾರು, ಜೀಪು ಮತ್ತು ವ್ಯಾನ್‌ಗೆ  ಭದ್ರತಾ ಠೇವಣಿಯಾಗಿ 150 ರೂಪಾಯಿ ವಸೂಲಿ ಮಾಡುತ್ತದೆ.

ಪೇಟಿಎಂ ಟ್ಯಾಗ್ ಪಡೆಯಲು 100 ರೂಪಾಯಿ ಶುಲ್ಕ ಪಾವತಿಸಬೇಕು. ಇದರಲ್ಲಿ ಸುಂಕಕ್ಕಾಗಿ 84.75 ರೂಪಾಯಿ ಮತ್ತು ಜಿಎಸ್ಟಿಗಾಗಿ 15.25 ರೂಪಾಯಿ ಶುಲ್ಕ ವಿಧಿಸುತ್ತದೆ. ಟ್ಯಾಗ್ ಮರು ವಿತರಣೆ ಶುಲ್ಕಕ್ಕಾಗಿ  100 ರೂಪಾಯಿ ವಿಧಿಸುತ್ತದೆ. ಪೇಟಿಎಂ ಸಹ ಫಾಸ್ಟ್ಯಾಗ್ ಸೆಕ್ಯುರಿಟಿ ಬ್ಯಾಲೆನ್ಸ್ ಆಗಿ 250 ರೂಪಾಯಿ ಪಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read