ಬೆಂಗಳೂರು: ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ಇದೀಗ ರಾಜ್ಯ ರಾಜಧಾನಿ ಬೆಂಗಳೂಳುರಿಗೂ ವ್ಯಾಪಿಸಿದೆ.
ಕಬ್ಬು ಬೆಳೆಗಾರರು, ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಾಥ್ ನೀಡಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿ ಕಬ್ಬು ಬೆಳೆಗಾರರು ಹಾಗೂ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಬೇಕು ಹಾಗೂ ರೈತರ ಸಂಕಷ್ಟ ಆಲಿಸಿ ಸಮಸ್ಯೆ ಪರಿಹರಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರೈತರ ಜೊತೆ ನಾವಿದ್ದೇವೆ. ಅನ್ನದಾತನ ಸಂಕಷ್ಟದಲ್ಲಿ ಭಾಗಿಯಾಗುವುದು ನಾಡಿನ ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ರೈತರ ಹೋರಾಟದ ಪರವಾಗಿ ನಾವೂ ಭಾಗಿಯಾಗಿದ್ದಾಗಿ ಕರವೇ ಕಾರ್ಯಕರ್ತರು ತಿಳಿಸಿದ್ದಾರೆ. ಮತ್ತೊಂದೆಡೆ ಕೋಲಾರ ಜಿಲ್ಲೆಯಲ್ಲಿಯೂ ಹೋರಾಟ ಆರಂಭವಾಗಿದೆ. ಪ್ರತಿಭಟನಾಕಾರರು, ಕನ್ನಡಪರ ಸಂಘಟನೆಗಳು ಕೈಯಲ್ಲಿ ಕಬ್ಬು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
