ಕೊಲಂಬೊ : ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2026ರ ಟಿ20 ವಿಶ್ವಕಪ್ನ ಮಹಾಹೋರಾಟದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 61 ರನ್ಗಳ ಬೃಹತ್ ಅಂತರದಿಂದ ಸೋಲಿಸಿದೆ. ಭಾರತ ನೀಡಿದ 176 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ಭಾರತೀಯ ಬೌಲರ್ಗಳ ಎದುರು ಸಂಪೂರ್ಣವಾಗಿ ಶರಣಾಯಿತು. ಈ ಹೀನಾಯ ಸೋಲಿನ ನಂತರ, ಪಾಕಿಸ್ತಾನಿ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಭೀಕರ ಟ್ರೋಲಿಂಗ್ ಮತ್ತು ಮೀಮ್ಸ್ಗಳನ್ನು ಎದುರಿಸುತ್ತಿದ್ದಾರೆ.
ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ (5 ರನ್) ಮತ್ತು ನಾಯಕ ಸಲ್ಮಾನ್ ಅಲಿ ಆಗಾ ಅವರ ಕಳಪೆ ಪ್ರದರ್ಶನ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಬಾಬರ್ ಅಜಮ್ ಔಟ್ ಆದ ರೀತಿಯ ಬಗ್ಗೆ ಲೇವಡಿ ಮಾಡಲಾಗುತ್ತಿದೆ. ‘ಕಿಂಗ್’ ಎಂದು ಕರೆಯಲ್ಪಡುವ ಬಾಬರ್ ಅವರ ‘ನಂಬರ್-1 ಬ್ಯಾಟರ್’ ಎಂಬ ಹಣೆಪಟ್ಟಿಯ ಬಗ್ಗೆ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಇನ್ನು ಕೆಲವರು ಟಾಸ್ ಸಮಯದಲ್ಲಿ ಸಲ್ಮಾನ್ ಅಲಿ ಆಗಾ ನೀಡಿದ್ದ ಹೇಳಿಕೆಗಳನ್ನು ನೆನಪಿಸಿ ಕಾಲೆಳೆಯುತ್ತಿದ್ದಾರೆ. ಬೌಲಿಂಗ್ ಶೈಲಿಯಿಂದ ಸುದ್ದಿಯಾಗಿದ್ದ ಉಸ್ಮಾನ್ ತಾರಿಕ್ ಅವರ ಬ್ಯಾಟಿಂಗ್ ಬಗ್ಗೆ ಒಬ್ಬ ಬಳಕೆದಾರರು, “ಉಸ್ಮಾನ್ ಅವರ ಬೌಲಿಂಗ್ನಂತೆ ಅವರ ಬ್ಯಾಟಿಂಗ್ನಲ್ಲೂ ವಿಚಿತ್ರವಾದ ವಿರಾಮ (Pause) ಇದೆ” ಎಂದು ತಮಾಷೆ ಮಾಡಿದ್ದಾರೆ.
‘ಬಹಿಷ್ಕಾರವೇ ವಾಸಿಯಾಗಿತ್ತು’
ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, “ಭಾರತದ ವಿರುದ್ಧ ಆಡುವ ಬದಲು ಪಾಕಿಸ್ತಾನ ಈ ಪಂದ್ಯವನ್ನು ಬಹಿಷ್ಕರಿಸಿದ್ದರೆ ಚೆನ್ನಾಗಿತ್ತು. ಕನಿಷ್ಠ ಇಷ್ಟೊಂದು ಅವಮಾನವಾದರೂ ಆಗುತ್ತಿರಲಿಲ್ಲ” ಎಂದು ಬರೆದಿದ್ದಾರೆ.
ಕಣ್ಣೀರಿಟ್ಟ ಪಾಕಿಸ್ತಾನಿ ಅಭಿಮಾನಿಗಳು
ಕ್ರೀಡಾಂಗಣದಲ್ಲಿ ಪಾಕಿಸ್ತಾನಿ ಅಭಿಮಾನಿಗಳು ಸೋಲನ್ನು ತಾಳಲಾರದೆ ಅಳುತ್ತಿರುವ ಫೋಟೋಗಳು ವೈರಲ್ ಆಗಿವೆ. ಇದನ್ನು ಬಳಸಿಕೊಂಡು ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಮೀಮ್ಸ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬಾಬರ್ ಅಜಮ್ಗೆ ಮೀಮ್ಸ್ ಬಿಸಿ
ಪಾಕಿಸ್ತಾನದ ಉಳಿದ ಆಟಗಾರರಿಗಿಂತ ಹೆಚ್ಚಾಗಿ ಬಾಬರ್ ಅಜಮ್ ಮೇಲೆ ಹೆಚ್ಚು ಜೋಕ್ಗಳು ಹರಿದಾಡುತ್ತಿವೆ. ಬಾಬರ್ ನಾವೆಯೊಂದರಲ್ಲಿ ಕುಳಿತಿರುವಂತೆ ಚಿತ್ರಿಸಿರುವ ಮೀಮ್ವೊಂದು ಈಗ ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.

