ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ ಕಾರ್ಮಿಕನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಮ್ಮಸಂದ್ರ ನಿವಾಸಿ ಪೂನಂ ಸಿಂಗ್(30) ಕೊಲೆಯಾದ ಮಹಿಳೆ. ಆಕೆಯ ಪತಿ ರವೀಂದ್ರ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿಚಾರವಾಗಿ ಮನೆಯಲ್ಲಿ ಗುರುವಾರ ರಾತ್ರಿ ದಂಪತಿಯ ನಡುವೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪೂನಂ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಲಾಗಿದೆ.
ಮೂರು ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ಉತ್ತರ ಪ್ರದೇಶ ಮೂಲದ ಪೂನಂ ಸಿಂಗ್ ಮತ್ತು ರವೀಂದ್ರ ಸಿಂಗ್ ಬೆಂಗಳೂರಿಗೆ ಬಂದಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದೊಮ್ಮಸಂದ್ರದಲ್ಲಿ ದಂಪತಿ ನೆಲೆಸಿದ್ದು, ರವೀಂದ್ರ ಸಿಂಗ್ ಬಡಗೆ ಕೆಲಸ ಮಾಡಿಕೊಂಡಿದ್ದ. ವಿಪರೀತ ಕುಡಿಯುತ್ತಿದ್ದ ರವೀಂದ್ರಸಿಂಗ್ ಮನೆಯಲ್ಲಿ ಜಗಳವಾಡುತ್ತಿದ್ದ. ಇದೇ ಕಾರಣಕ್ಕೆ ಗುರುವಾರ ಕೂಡ ಜಗಳವಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಮೃತಳ ಸಹೋದರ ನೀಡಿದ ದೂರಿನ ಮೇರೆಗೆ ವರ್ತೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.