ಶಿವಮೊಗ್ಗ: ಕೌಟುಂಬಿಕ ಕಲಹ ಕಲಹದಿಂದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಕರ್ಕಮುಡಿ ಬಳಿ ಭಾನುವಾರ ನಡೆದಿದೆ.
ದೇವಚಂದ್ರ(52) ಮೃತಪಟ್ಟವರು. ಜೈನ ಸಮುದಾಯಕ್ಕೆ ಸೇರಿದ ದೇವಚಂದ್ರ ಪೌರೋಹಿತ್ಯ ನಡೆಸುತ್ತಿದ್ದರು. ಮೊದಲನೇ ಮದುವೆ ಆಗಿದ್ದ ಅವರು ಕೆಲವು ವರ್ಷಗಳ ಹಿಂದೆ ಕರ್ಕಮುಡಿ ಗ್ರಾಮದ ಲಲಿತಾ ಜೊತೆಗೆ ಎರಡನೇ ಮದುವೆಯಾಗಿದ್ದರು. ಲಲಿತಾ ಅವರಿಗೂ ಈ ಮೊದಲು ಮದುವೆಯಾಗಿತ್ತು. ಮೊದಲ ಪತಿಯಿಂದ ಯಶವಂತ ಎಂಬ ಪುತ್ರ ಇದ್ದಾನೆ. ಲಲಿತಾ ಮತ್ತು ದೇವಚಂದ್ರ ದಂಪತಿಗೆ ಒಬ್ಬ ಪುತ್ರಿ ಇದ್ದಾಳೆ. ಕೆಲ ದಿನಗಳಿಂದ ಪತಿ, ಪತ್ನಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.
ಲಲಿತಾ ಅವರ ಸಹೋದರ ಓಂಕಾರ ತನ್ನ ಮನೆಯಲ್ಲಿ ಭಾನುವಾರ ಧಾರ್ಮಿಕ ಕಾರ್ಯ ಹಮ್ಮಿಕೊಂಡಿದ್ದು, ಅಲ್ಲಿಗೆ ದೇವಚಂದ್ರ ಬಂದಿದ್ದಾರೆ. ಈ ವೇಳೆ ಲಲಿತಾ, ಓಂಕಾರ ಮತ್ತು ಯಶವಂತ ಅವರಿಗೂ ದೇವಚಂದ್ರನಿಗೂ ಜಗಳವಾಗಿದೆ. ಗಲಾಟೆಯ ವೇಳೆ ದೇವಚಂದ್ರ ಅವರ ತಲೆಗೆ ಕಟ್ಟಿಗೆಯಿಂದ ಆರೋಪಿಗಳು ಹೊಡೆದು ಹಲ್ಲೆ ಮಾಡಿದ್ದರಿಂದ ತೀವ್ರ ರಕ್ತಸ್ರಾವಗೊಂಡು ದೇವಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರ ಸಹೋದರ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.