ಮುಂಬೈ: ಇತ್ತೀಚಿನ ದಿನಗಳಲ್ಲಿ ನಕಲಿ ಬಾಬಾಗಳು, ದೆವ್ವ ಬಿಡಿಸುವವರು, ಕಾಯಿಲೆ ವಾಸಿ ಮಾಡುವ ಡೋಂಗಿ ಬಾಬಾಗಳ ಹುಚ್ಚಾಟ ಹೆಚ್ಚಾಗಿದ್ದು, ಇಲ್ಲೋರ್ವ ಬಾಬಾನ ವಿಲಕ್ಷಣ ವರ್ತನೆಗೆ ಗ್ರಾಮಸ್ಥಉ ಹೈರಾಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದ ವೈಜಾಪುರ ತಹಸಿಲ್ ನ ಶಿಯೂರ್ ಗ್ರಾಮದಲ್ಲಿ ದೇವಸ್ಥಾನದ ಬಳಿ ನಕಲಿ ಬಾಬಾ ಸಂಜಯ್ ಪಗಾರೆ ಎಂಬಾತ ಗ್ರಾಮಸ್ಥರಿಗೆ ಕಾಯುಲೆ ವಾಸಿ ಮಾಡುತ್ತೇನೆ, ದೆವ್ವ ಬಿಡಿಸುತ್ತೇನೆ. ಮದುವೆಯಾಗದವರಿಗೆ ಮದುವೆ ಮಾಡಿಸುತ್ತೇನೆ. ಸಂಕಷ್ಟ ಪರಿಹರಿಸುತ್ತೇನೆ ಎಂದು ಮಂಕುಬೂದಿ ಎರಚಿದ್ದೂ ಅಲ್ಲದೇ ಔಷಧಿ ಎಂದು ಸುಳ್ಳು ಹೇಳಿ ತನ್ನ ಭಕ್ತರಿಗೆ ಮೂತ್ರ ಕುಡಿಸಿ, ಬಾಯಲ್ಲಿ ಬೂಟು ತುರುಕಿ ಚಿತ್ರಹಿಂಸೆ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಎರಡು ವರ್ಷಗಳಿಂದ ಸಂಜಯ್ ಪಗಾರೆ ಎಂಬಾತ ತನಗೆ ದೈವೀಶಕ್ತಿಯಿದೆ. ಅಲೌಕಿಕ ಶಕ್ತಿಯಿಂದಾಗಿ ದುಷಶಕ್ತಿ ಓಡಿಸುತ್ತೇನೆ ಎಂದು ಹೇಳಿಕೊಂಡು ಗ್ರಾಮಸ್ಥರನ್ನು ಮರಳು ಮಾಡಿದ್ದ. ಸಮಸ್ಯೆಗಳನ್ನು ಹೇಳಿಕೊಂಡು ಬಂದ ಜನರಿಗೆ ಸಂಕಷ್ಟ ಪರಿಹಾರ ಮಾಡುವುದಾಗಿ ಹೇಳಿ ಪೂಜೆ ಮಾಡಿಸುವುದು, ಯಂತ್ರ-ತಂತ್ರ ಮಾಡಿಕೊಡುವುದು ಮಾಡುತ್ತಿದ್ದ. ಬರಬರುತ್ತ ನಕಲಿ ಬಾಬಾನ ಹುಚ್ಚಾಟ ಮಿತಿ ಮೀರಿದೆ. ದೆವ್ವ ಹಿಡಿದೆದೆ ಎಂದು ಕೆಲವರಿಗೆ ಮನಬಂದಂತೆ ಕೋಲಿನಿಂದ ಥಳಿಸುವುದು, ಹಿಂಸಿಸುವುದು, ತನ್ನ ಚಪ್ಪಲಿ, ಬೂಟುಗಳನ್ನು ಬಾಯಲ್ಲಿ ತುರುಕಿ ಹೊಡೆಯುವುದು, ದೇವಾಲಯದ ಸುತ್ತ ಓಡುವಂತೆ ಓಡಿಸುತ್ತಿದ್ದ.
ಮರಗಳ ಎಲೆಗಳನ್ನು ಭಕ್ತರಿಗೆ ತಿನ್ನಿಸುವುದು, ಮುಖದ ಮೇಲೆ ಕಾಲಿಟ್ಟು ಹಿಂಸಿಸುವುದು, ಅಷ್ಟೇಅಲ್ಲ ಕಾಯಿಲೆಗಳನ್ನು ವಾಸಿ ಮಾಡುವುದಾಗಿ ಹೇಳಿ ಔಷಧಿ ಎಂದು ನಂಬಿಸಿ ಮೂತ್ರ ಕುಡಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಬಾಬನ ವಿಲಕ್ಷಣ ವರ್ತನೆ, ಕ್ರೌರ್ಯದ ವಿಡಿಯೋ ವೈರಲ್ ಆಗಿದೆ. ನಕಲಿ ಬಾಬಾನ ಚಿತ್ರಹಿಂಸೆ ಹೆಚ್ಚಾಗುತ್ತಿದ್ದಂತೆ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ನಕಲಿ ಬಾಬಾನನ್ನು ಬಂದಿಸಿರುವ ಪೊಲೀಸರು ವಂಚನೆ, ಹಲ್ಲೆ, ಮೂಢನಂಬಿಕೆ ಪ್ರಚಾರ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.