ನಿನ್ನೆ ( ಮೇ 18 ) ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 63ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 5 ವಿಕೆಟ್ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇಆಫ್ಗೆ ಪ್ರವೇಶ ಪಡೆದುಕೊಂಡಿತು. ಜತೆಗೆ ಗುಜರಾತ್ ಟೈಟನ್ಸ್ ಸಹ ಪ್ಲೇಆಫ್ ಸುತ್ತಿಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಕಾರ್ತಿಕ್ ಶರ್ಮಾ ಹಾಗೂ ಡಿವಾಲ್ಡ್ ಬ್ರೆವಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 181 ರನ್ಗಳ ಸವಾಲಿನ ಗುರಿಯನ್ನು ನೀಡಿತ್ತು. ಚೇಸಿಂಗ್ ಕಠಿಣವಾದ ಚೆಪಾಕ್ ಪಿಚ್ನಲ್ಲಿ ಚೆನ್ನೈ ನೀಡಿದ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಬಾರಿಸಿತು.
ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಾದಿ ಬಹುತೇಕ ಮುಚ್ಚಿದ್ದು, ಉಳಿದ ತಂಡಗಳ ಫಲಿತಾಂಶದ ಆಧಾರದ ಮೇಲೆ ಪ್ಲೇಆಫ್ ಪ್ರವೇಶಿಸಬಹುದಾ ಎಂಬ ಲೆಕ್ಕಾಚಾರ ಶುರುವಾಗಿದೆ. ಒಂದೆಡೆ ಪಾಪ ಚೆನ್ನೈ ಸೂಪರ್ ಕಿಂಗ್ಸ್ ಯಾರ ಮೇಲೂ ಅವಲಂಬಿತವಾಗದೇ ತಾವೇ ಅರ್ಹ ಅಂಕ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ ಕೈತಪ್ಪಿದ್ದನ್ನು ನೆನೆದು ಅಭಿಮಾನಿಗಳು ಬೇಸರಕ್ಕೊಳಗಾಗಿದ್ದರೆ ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ತಂಡ ಟಾಸ್ ಫಿಕ್ಸಿಂಗ್ ಮಾಡಿದೆ ಎಂಬ ಗಂಭೀರ ಆರೋಪವನ್ನು ಕೆಲ ನೆಟ್ಟಿಗರು ಮಾಡಿದ್ದಾರೆ.
ಹೌದು, ಟಾಸ್ ವೇಳೆ ರುತುರಾಜ್ ಗಾಯಕ್ವಾಡ್ ಕಾಯಿನ್ ಎಸೆದಿದ್ದು ಈ ಸಂದರ್ಭದಲ್ಲಿ ಪ್ಯಾಟ್ ಕಮಿನ್ಸ್ ತಮ್ಮ ಆಯ್ಕೆಯನ್ನು ತಿಳಿಸಿದ್ದಾರೆ. ಈ ಕುರಿತು ಪೋಸ್ಟ್ಗಳನ್ನು ಹಂಚಿಕೊಂಡು ಪ್ಯಾಟ್ ಕಮಿನ್ಸ್ ‘ಟೈಲ್ಸ್’ ಎಂದು ಹೇಳಿದ್ದಾರೆ, ಟಾಸ್ ಸಹ ಟೈಲ್ಸ್ ಬಿದ್ದಿದ್ದು, ರವಿಶಾಸ್ತ್ರಿ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದರು ಎಂದು ಹೇಳದೇ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದರು ಎಂದು ಹೇಳಿದರು, ಇದನ್ನು ಕಂಡು ಕಮಿನ್ಸ್ ಬೆಪ್ಪಾಗಿ ನಿಂತರು ಎಂದು ಆರೋಪಿಸಿದ್ದಾರೆ.
ಆದರೆ ಅಸಲಿಯತ್ತಿಗೆ ಪ್ಯಾಟ್ ಕಮಿನ್ಸ್ ಟೈಲ್ಸ್ ಆಯ್ಕೆಯನ್ನೇ ಮಾಡಿಲ್ಲ. ಅವರು ಹೆಡ್ಸ್ ಎಂದು ಹೇಳಿರುವುದು ಟಾಸ್ ಸಂದರ್ಭದ ಅಧಿಕೃತ ವಿಡಿಯೊದಲ್ಲಿ ಸೆರೆಯಾಗಿದೆ. ಕಮಿನ್ಸ್ ಹೆಡ್ ಎಂದು ಹೇಳಿದ್ದು, ಟಾಸ್ ಟೈಲ್ಸ್ ಬಿದ್ದ ಕಾರಣ ರುತುರಾಜ್ ಟಾಸ್ ಗೆದ್ದರು ಎಂದು ಸರಿಯಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ರೀತಿ ಚೆನ್ನೈ ಸೂಪರ್ ಕಿಂಗ್ಸ್ ರೀತಿ ಮೋಸದ ಆಟ, ಫಿಕ್ಸಿಂಗ್ ಎಂಬ ಗಂಭೀರ ಆರೋಪಗಳು ಹಲವು ಬಾರಿ ಕೇಳಿಬಂದಿರುವುದು ನಿಮಗೆಲ್ಲ ತಿಳಿದೇ ಇದೆ. ಈಗಿನ ಹಾಗೆ ಹಿಂದೆಯೂ ಸ್ಪಷ್ಟವಾಗಿ ವಾಯ್ಸ್ ಸೆರೆಹಿಡಿಯುವ ತಂತ್ರಜ್ಞಾನ ಇದ್ದಿದ್ದರೆ ಅವುಗಳ ಸತ್ಯಾಂಶವೂ ಹೊರಬೀಳುತ್ತಿತ್ತೇನೋ.

