“ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ನಮ್ಮ ಜವಾಬ್ದಾರಿ. ಆದರೆ ನಮ್ಮ ಸುರಕ್ಷತೆಯ ಕಥೆಯೇನು? ನಾವು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳು ನೂರಾರು, ಅವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.”ಇವು ಸೆಂಟ್ರಲ್ ರೈಲ್ವೆಯ ಮುಂಬೈ ಡಿವಿಜನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 72 ಮೇಲ್ ಲೋಕೋ ಪೈಲಟ್‌ಗಳಲ್ಲಿ ಒಬ್ಬರಾದ ಅಮೋಲ್ (ಹೆಸರು ಬದಲಾಯಿಸಲಾಗಿದೆ) ಅವರ ಮಾತುಗಳು. ದೈಹಿಕ ಮತ್ತು ಮಾನಸಿಕ ಒತ್ತಡ ತಾಳಲಾರದೆ ಇವರು ಇತ್ತೀಚೆಗೆ ಸ್ವಯಂ ನಿವೃತ್ತಿ (VRS) ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಹೌದು. ವಿಪರೀತ ಮಾನಸಿಕ ಒತ್ತಡ, ಅವೈಜ್ಞಾನಿಕ ಕೆಲಸದ ಸಮಯ ಮತ್ತು ಆಡಳಿತ ಮಂಡಳಿಯ ಕಿರುಕುಳದಿಂದಾಗಿ ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿ 72 ಮಂದಿ ಲೋಕೋ ಪೈಲಟ್‌ಗಳು ಡಿವಿಜನಲ್ ರೈಲ್ವೆ ಮ್ಯಾನೇಜರ್‌ಗೆ ಪತ್ರ ಬರೆದಿದ್ದಾರೆ. ಆದರೆ ರೈಲ್ವೆ ಇಲಾಖೆಯು ಶೀಘ್ರದಲ್ಲೇ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ಅಮೋಲ್ ಹಂಚಿಕೊಂಡ ನೋವಿನ ಸಂಗತಿಗಳು:
ಸುಮಾರು 30 ವರ್ಷಗಳ ಕಾಲ ರೈಲ್ವೆ ಸೇವೆ ಸಲ್ಲಿಸಿರುವ 51 ವರ್ಷದ ಅಮೋಲ್, ತಮ್ಮ ವೃತ್ತಿಜೀವನದ ಕಹಿ ಸತ್ಯಗಳನ್ನು ಹೀಗೆ ಬಿಚ್ಚಿಟ್ಟಿದ್ದಾರೆ:
ವಿಶ್ರಾಂತಿ ಇಲ್ಲದ ಕೆಲಸ: “ಮೂರು ದಶಕಗಳ ಸೇವೆಯ ನಂತರವೂ ಶಿಫ್ಟ್‌ಗಳಲ್ಲಿ ಯಾವುದೇ ಕ್ರಮಬದ್ಧತೆ ಇಲ್ಲ. ಗಂಟೆಗಟ್ಟಲೆ ಕೆಲಸದ ಒತ್ತಡ ಮತ್ತು ಡ್ಯೂಟಿ ಮುಗಿದ ನಂತರವೂ ಫೋನ್ ಕಾಲ್‌ಗಳ ಕಿರಿಕಿರಿ ಇರುತ್ತದೆ.”ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ, ಇರುವ ಸಿಬ್ಬಂದಿಯೇ ಅತಿಯಾದ ಕೆಲಸ ಮಾಡಬೇಕಾಗಿದೆ.ಸಿಗ್ನಲ್ ವಿಚಾರದಲ್ಲಿ ಸಣ್ಣ ತಪ್ಪಾದರೂ ಕಠಿಣ ಕ್ರಮ, ಸಂಬಳ ಕಡಿತದ ಭಯ ನಮ್ಮನ್ನು ಸದಾ ಕಾಡುತ್ತಿರುತ್ತದೆ.”
ಮೂಲಸೌಕರ್ಯಗಳ ಕೊರತೆ: ವಿಶ್ರಾಂತಿ ಪಡೆಯುವ ‘ರನ್ನಿಂಗ್ ರೂಮ್’ಗಳಲ್ಲಿ ಸ್ವಚ್ಛತೆ ಇರುವುದಿಲ್ಲ. ಗುಣಮಟ್ಟವಿಲ್ಲದ ಆಹಾರ ಮತ್ತು ಗದ್ದಲದ ವಾತಾವರಣದಿಂದಾಗಿ ನಮಗೆ ಅಗತ್ಯವಿರುವ ವಿಶ್ರಾಂತಿ ಸಿಗುತ್ತಿಲ್ಲ.”ಇದು ನಮ್ಮ ಐಷಾರಾಮಿ ಬೇಡಿಕೆಯಲ್ಲ, ಇದು ಸುರಕ್ಷತೆಗೆ ಸಂಬಂಧಿಸಿದ ಅಗತ್ಯತೆ. ನಾನು ರೈಲ್ವೆಗೆ ನನ್ನ ಜೀವನವನ್ನೇ ಕೊಟ್ಟಿದ್ದೇನೆ. ಆದರೆ ಈಗ ನನ್ನ ಆರೋಗ್ಯ ಮತ್ತು ಕುಟುಂಬವನ್ನೂ ನೋಡಿಕೊಳ್ಳಬೇಕಿದೆ. ಎಂದು ಅಮೋಲ್ ಹೇಳಿದ್ದಾರೆ.
ಕುಟುಂಬ ಮತ್ತು ಆರೋಗ್ಯದ ಮೇಲೆ ಪರಿಣಾಮ
ನಿರಂತರ ಒತ್ತಡವು ಇವರ ಆರೋಗ್ಯದ ಮೇಲೆ ಮಾತ್ರವಲ್ಲದೆ ಕುಟುಂಬ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ದೇಶದ ಜೀವನಾಡಿ ಎನಿಸಿಕೊಂಡಿರುವ ರೈಲನ್ನು ಸುರಕ್ಷಿತವಾಗಿ ಓಡಿಸುವ ಇಂಜಿನ್ ಸಿಬ್ಬಂದಿಯ ಕ್ಷೇಮವನ್ನೂ ಸರ್ಕಾರ ಪರಿಗಣಿಸಬೇಕು ಎಂಬುದು ಇವರ ಆಶಯವಾಗಿದೆ.

