ನವದೆಹಲಿ: ಏರ್ ಇಂಡಿಯಾ ಸಂಸ್ಥೆಯು ಮಾಡಿಕೊಂಡ ಒಂದು ಸಣ್ಣ ಆಡಳಿತಾತ್ಮಕ ಲೋಪದಿಂದಾಗಿ ಸುಮಾರು 300ಕ್ಕೂ ಹೆಚ್ಚು ಪ್ರಯಾಣಿಕರು ಅಕ್ಷರಶಃ ‘ಆಕಾಶದಲ್ಲೇ ಸುತ್ತಾಡಿ’ ಮತ್ತೆ ದೆಹಲಿಗೇ ಮರಳುವಂತಾಗಿದೆ. ಕೆನಡಾದ ವ್ಯಾಂಕೋವರ್‌ಗೆ ಹೊರಟಿದ್ದ ವಿಮಾನವು ಅರ್ಧ ದಾರಿಯಿಂದಲೇ ಯು-ಟರ್ನ್ ಹೊಡೆದ ಘಟನೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಏನಿದು ಘಟನೆ?
ಮಾರ್ಚ್ 19ರಂದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವ್ಯಾಂಕೋವರ್‌ಗೆ ಏರ್ ಇಂಡಿಯಾ ವಿಮಾನ (AI185) ಟೇಕಾಫ್ ಆಗಿತ್ತು. ಸುಮಾರು 7 ರಿಂದ 8 ಗಂಟೆಗಳ ಕಾಲ ಹಾರಾಟ ನಡೆಸಿದ ವಿಮಾನವು ಚೀನಾದ ಕುನ್ಮಿಂಗ್ ವಾಯುಪ್ರದೇಶವನ್ನು ಪ್ರವೇಶಿಸುವ ಹೊತ್ತಿಗೆ, ವಿಮಾನಯಾನ ಸಂಸ್ಥೆಯ ಅಧಿಕಾರಿಗಳಿಗೆ ತಾವು ಮಾಡಿದ ದೊಡ್ಡ ತಪ್ಪು ಅರಿವಿಗೆ ಬಂದಿದೆ.
ಲೋಪವಾಗಿದ್ದು ಎಲ್ಲಿ?
ಏರ್ ಇಂಡಿಯಾ ಸಂಸ್ಥೆಯು ಕೆನಡಾಕ್ಕೆ ವಿಮಾನಗಳನ್ನು ಚಲಾಯಿಸಲು ಕೇವಲ ಬೋಯಿಂಗ್ 777-300ER ಮಾದರಿಯ ವಿಮಾನಗಳಿಗೆ ಮಾತ್ರ ನಿಯಂತ್ರಕ ಅನುಮತಿ (Regulatory Clearance) ಹೊಂದಿದೆ.ಆದರೆ, ಅಂದು ತಪ್ಪಾಗಿ ಬೋಯಿಂಗ್ 777-200LR ವಿಮಾನವನ್ನು ಈ ಮಾರ್ಗದಲ್ಲಿ ನಿಯೋಜಿಸಲಾಗಿತ್ತು. ಈ ವಿಮಾನಕ್ಕೆ ಕೆನಡಾ ವಾಯುಪ್ರದೇಶ ಪ್ರವೇಶಿಸಲು ಅಗತ್ಯವಾದ ಕಾನೂನುಬದ್ಧ ಅನುಮತಿಗಳಿರಲಿಲ್ಲ.
8 ಗಂಟೆಗಳ ವ್ಯರ್ಥ ಹಾರಾಟ: ವಿಮಾನವು ಚೀನಾ ವಾಯುಪ್ರದೇಶದಲ್ಲಿದ್ದಾಗಲೇ ದೆಹಲಿಗೆ ವಾಪಸ್ ಬರುವಂತೆ ಸೂಚನೆ ನೀಡಲಾಯಿತು. ಇದರಿಂದಾಗಿ ಸುಮಾರು 8 ಗಂಟೆಗಳ ಕಾಲ ಹಾರಾಟ ನಡೆಸಿದ ವಿಮಾನ ಮತ್ತೆ ದೆಹಲಿಗೇ ಬಂದು ಲ್ಯಾಂಡ್ ಆಯಿತು.ಇಂತಹ ಬೃಹತ್ ವಿಮಾನಗಳು ಗಂಟೆಗೆ ಟನ್‌ಗಟ್ಟಲೆ ಇಂಧನ ವ್ಯರ್ಥ ಮಾಡುತ್ತವೆ. ಈ ಎಡವಟ್ಟಿನಿಂದಾಗಿ ಏರ್ ಇಂಡಿಯಾಕ್ಕೆ ಇಂಧನ ಮತ್ತು ಕಾರ್ಯಾಚರಣೆಯ ವೆಚ್ಚ ಸೇರಿ ಬರೋಬ್ಬರಿ 60 ಲಕ್ಷ ನಷ್ಟ ಉಂಟಾಗಿದೆ.
ಪ್ರಯಾಣಿಕರ ಪರದಾಟ: 300ಕ್ಕೂ ಹೆಚ್ಚು ಪ್ರಯಾಣಿಕರು ಸುದೀರ್ಘ ಪ್ರಯಾಣದ ನಂತರವೂ ಗಮ್ಯಸ್ಥಾನ ತಲುಪಲಾಗದೆ ದೆಹಲಿ ವಿಮಾನ ನಿಲ್ದಾಣದಲ್ಲೇ ಉಳಿಯಬೇಕಾಯಿತು. ನಂತರ ಅವರಿಗೆ ಹೋಟೆಲ್ ವ್ಯವಸ್ಥೆ ಮಾಡಿ, ಮರುದಿನ ಬೇರೆ ವಿಮಾನದ ಮೂಲಕ ವ್ಯಾಂಕೋವರ್‌ಗೆ ಕಳುಹಿಸಿಕೊಡಲಾಯಿತು.
ಸಂಸ್ಥೆಯ ಸ್ಪಷ್ಟನೆ:
ಈ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, “ಕಾರ್ಯಾಚರಣೆಯ ತಾಂತ್ರಿಕ ಕಾರಣಗಳಿಂದಾಗಿ ವಿಮಾನವು ದೆಹಲಿಗೆ ಮರಳಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿಯಮಗಳ ಪಾಲನೆಗೆ ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದೆ.

