ಬೆಂಗಳೂರು: ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತಿಳಿಯಲು ಮೌಲ್ಯಾಂಕನ ಪರೀಕ್ಷೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಂಕನ ನಡೆಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ವಿದ್ಯಾರ್ಥಿಗಳ ಕಲಿಕೆಯನ್ನು ಸಮರ್ಪಕವಾಗಿಸುವ ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನೆ, ಕಲಿಕಾ ಫಲಾಧಾರಿತ ಪ್ರಶ್ನೆ ಕೋಠಿ ಸೇತುಬಂಧಗಳ ಉಪಕ್ರಮದಡಿ ಮೌಲ್ಯಾಂಕನ ಪರೀಕ್ಷೆ ನಡೆಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಮಾಡಬೇಕಾದ ಪಾಠಗಳು ಕೈಗೊಳ್ಳಬೇಕಾದ ಚಟುವಟಿಕೆಗಳ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಅದರ ಪ್ರಕಾರ ಶಿಕ್ಷಕರು ಪಾಠವಾರು ಮೌಲ್ಯಾಂಕನ ನಡೆಸಬೇಕು. ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಕೋಠಿ ಆಧರಿಸಿ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ಕೈಗೊಂಡು ವಿದ್ಯಾರ್ಥಿಗಳ ಕಲಿಕಾ ಪ್ರಗತಿ ತಿಳಿಯಬೇಕು. ಪಾಠ ಆಧರಿತ ಮೌಲ್ಯಾಂಕನ ವಿಶ್ಲೇಷಣೆ ವರದಿಯನ್ನು ಆಧರಿಸಿ ಪ್ರತಿ ಮೌಲ್ಯಾಂಕನ ನಂತರ ವಿದ್ಯಾರ್ಥಿಗಳ ಕಲಿಕಾ ಸಾಧನೆಯ ಕ್ರಮ ವಹಿಸಬೇಕು. ಈ ವರ್ಷದಿಂದ ಆರಂಭಿಸಿರುವ ಸಮಗ್ರ ಪ್ರಗತಿಪತ್ರ ಸಿದ್ಧಪಡಿಸಿ ಶಾಲಾ ಶೈಕ್ಷಣಿಕ ದಿನಾಚರಣೆಯಲ್ಲಿ ಅಳವಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ ತರಬೇಕು ಎಂದು ಹೇಳಲಾಗಿದೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ 10 ಅಂಕಗಳಿಗೆ ಲಿಖಿತ, 5 ಅಂಕಗಳಿಗೆ ಮೌಖಿಕ ಸೇರಿ ಒಟ್ಟು 15 ಅಂಕಗಳಿಗೆ ಎಲ್ಲಾ ರೀತಿಯ ವಸ್ತು ನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಂತೆ ಕಲಿಕಾ ಫಲಾಧಾರಿತ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಮೌಲ್ಯಾಂಕನ ನಡೆಸಬೇಕು ಎಂದು ಹೇಳಲಾಗಿದೆ.
ಆರರಿಂದ ಎಂಟನೇ ತರಗತಿ ಮಕ್ಕಳಿಗೆ 20 ಅಂಕಗಳಿಗೆ ವಸ್ತುನಿಷ್ಠ ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮೌಲ್ಯಂಕನ ಪರೀಕ್ಷೆ ನಡೆಸಬೇಕು.
ಎಂಟರಿಂದ 10ನೇ ತರಗತಿ ಮಕ್ಕಳಿಗೆ 20 ಅಂಕಗಳಿಗೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಕೋಠಿಯ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಮೌಲ್ಯಾಂಕನ ನಡೆಸಿ ಸ್ಯಾಟ್ಸ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಹೇಳಲಾಗಿದೆ.

