ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ವಿದ್ಯುತ್ ಸರಬರಾಜು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆಯೋಗ ಇನ್ನೂ ದರ ಪರಿಷ್ಕರಣೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಎಂದು ಮೇಲ್ಮನೆಯಲ್ಲಿ ಸಭಾನಾಯಕ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಇಂಧನ ಸಚಿವರ ಪರವಾಗಿ ಉತ್ತರ ನೀಡಿದ ಸಚಿವ ಬೋಸರಾಜು, ಏಪ್ರಿಲ್ 1ರಿಂದ ಯಾವುದೇ ದರ ಹೆಚ್ಚಳ ಇರುವುದಿಲ್ಲ. ವಿದ್ಯುತ್ ಸರಬರಾಜು ಕಂಪನಿಗಳು ಆದಾಯ ಕೊರತೆ ಒಳಗೊಂಡಂತೆ ಮುಂದಿನ ಹಣಕಾಸು ವರ್ಷ ಆರಂಭದ 120 ದಿನಗಳ ಮೊದಲು ಅರ್ಜಿ ಸಲ್ಲಿಸಲು ಅವಕಾಶವಿದೆ. 2025ರ ಮಾರ್ಚ್ 27ರಂದು 2025- 26 ನೇ ಸಾಲಿನಿಂದ 2027- 28ನೇ ಸಾಲಿನವರೆಗೂ ಬಹು ವಾರ್ಷಿಕ ದರ ಪರಿಷ್ಕರಣೆ ಆದೇಶ ಹೊರಡಿಸಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಸರಬರಾಜು ಕಂಪನಿಗಳು 2024- 25 ನೇ ಸಾಲಿನ ವಾರ್ಷಿಕ ನಿರ್ವಹಣಾ ಪರಿಶೀಲನಾ ಅರ್ಜಿಯನ್ನು ಕಳೆದ ನವೆಂಬರ್ 29ರಂದು ಆಯೋಗಕ್ಕೆ ಸಲ್ಲಿಸಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ 2802 ಕೋಟಿ ರೂ. ಸೇರಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು 4516 ಕೋಟಿ ರೂ. ನಷ್ಟದಲ್ಲಿವೆ ಎಂದು ತಿಳಿಸಿದ್ದಾರೆ.

