ಸುವರ್ಣಗಡ್ಡೆ ನೋಡಲು ಕಲ್ಮಶ ಹಾಗೂ ಆಕಾರವಿಲ್ಲದಂತೆ ಕಂಡರೂ, ಆಯುರ್ವೇದದಲ್ಲಿ ಇದನ್ನು ಅತ್ಯುತ್ತಮ ಗಿಡಮೂಲಿಕೆಗೆ ಸಮಾನವೆಂದು ಪರಿಗಣಿಸಲಾಗಿದೆ. ಆಧುನಿಕ ವೈದ್ಯಕೀಯ ವಿಜ್ಞಾನದಲ್ಲೂ ಇದರ ಉನ್ನತ ಪೋಷಕಾಂಶಗಳ ಬಗ್ಗೆ ಉಲ್ಲೇಖವಿದೆ. ಇದರಲ್ಲಿ ವಿಟಮಿನ್ C, B6, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಯಥೇಚ್ಛವಾಗಿ ನಾರಿನಂಶ (ಫೈಬರ್) ಇದೆ.
ಆಹಾರವೇ ಔಷಧ ಎಂಬ ಮಾತು ಸುವರ್ಣಗಡ್ಡೆಗೆ (Elephant Foot Yam) ಪಕ್ಕಾ ಹೊಂದಾಣಿಕೆಯಾಗುತ್ತದೆ. ನೋಡಲು ದೊಡ್ಡದಾಗಿ, ಆನೆಯ ಪಾದದಂತೆ ಕಾಣುವ ಈ ಗಡ್ಡೆ ತರಕಾರಿಯನ್ನು ಹಲವರು ಅಡುಗೆಗೆ ಬಳಸಲು ಹಿಂದೇಟು ಹಾಕುತ್ತಾರೆ. ಆದರೆ, ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯ ವಿಜ್ಞಾನದ ಪ್ರಕಾರ, ಸುವರ್ಣಗಡ್ಡೆಯಲ್ಲಿ ಅಡಗಿರುವ ಪೋಷಕಾಂಶಗಳು ಅನೇಕ ಗಂಭೀರ ಕಾಯಿಲೆಗಳಿಗೆ ಉತ್ತಮ ಪರಿಹಾರ ನೀಡುತ್ತವೆ.ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಸಿ, ಬಿ6 ಹಾಗೂ ಯಥೇಚ್ಛವಾಗಿ ನಾರಿನಂಶ (ಫೈಬರ್) ಹೊಂದಿರುವ ಸುವರ್ಣಗಡ್ಡೆಯಿಂದ ಸಿಗುವ ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿದೆ.
ಸುವರ್ಣಗಡ್ಡೆಯ ಪ್ರಮುಖ ಆರೋಗ್ಯ ಪ್ರಯೋಜನಗಳು
ಪೈಲ್ಸ್ ಹಾಗೂ ಜೀರ್ಣಾಂಗ ಸಮಸ್ಯೆಗಳಿಗೆ ಮುಕ್ತಿ:
ಸುವರ್ಣಗಡ್ಡೆಯಲ್ಲಿರುವ ಉನ್ನತ ಮಟ್ಟದ ನಾರಿನಂಶವು ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ. ಇದು ಮಲಬದ್ಧತೆಯನ್ನು ತಡೆಗಟ್ಟಿ, ಪೈಲ್ಸ್ (ಮೂಲವ್ಯಾಧಿ) ಸಮಸ್ಯೆಯಿಂದ ಉಂಟಾಗುವ ನೋವು ಮತ್ತು ಗುದದ್ವಾರದ ಊತವನ್ನು ಶಮನಗೊಳಿಸುತ್ತದೆ. ಆಯುರ್ವೇದದಲ್ಲಿ ಪೈಲ್ಸ್ ಚಿಕಿತ್ಸೆಗೆ ಸುವರ್ಣಗಡ್ಡೆಯನ್ನು ವಿಶೇಷವಾಗಿ ಬಳಸಲಾಗುತ್ತದೆ.
ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ಇದರ ಗ್ಲೈಸೆಮಿಕ್ ಸೂಚ್ಯಂಕ (Glycemic Index) ಬಹಳ ಕಡಿಮೆಯಿರುವುದರಿಂದ, ಸೇವಿಸಿದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣ ತಕ್ಷಣವೇ ಏರುವುದಿಲ್ಲ. ಇದರಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತವೆ.
ಉತ್ತಮ ಹೃದಯ ಆರೋಗ್ಯ ಹಾಗೂ ತೂಕ ಇಳಿಕೆ:
ಇದರಲ್ಲಿರುವ ನಾರಿನಂಶ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಶೇಖರಣೆಯಾಗದಂತೆ ತಡೆಯುತ್ತವೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು (Metabolism) ಹೆಚ್ಚಿಸಿ, ಹೊಟ್ಟೆಯ ಬೊಜ್ಜು ಕರಗಿಸಲು ಮತ್ತು ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ.
ದೇಹದ ಕಲ್ಮಶ ಹೊರಹಾಕುವಿಕೆ :
ಸುವರ್ಣಗಡ್ಡೆ ಸೇವನೆಯಿಂದ ಕರುಳು ಮತ್ತು ಯಕೃತ್ (Liver) ಭಾಗಗಳಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಇದು ಯಕೃತ್ತಿನ ಆರೋಗ್ಯವನ್ನು ವೃದ್ಧಿಸಿ, ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ.
ಮೂಳೆ, ತ್ವಚೆ ಮತ್ತು ಕೂದಲಿನ ರಕ್ಷಣೆ:
ವಿಟಮಿನ್ C ಮತ್ತು ಬೀಟಾ ಕ್ಯಾರೋಟಿನ್ ಕೊಲಾಜನ್ ಉತ್ಪಾದನೆಗೆ ನೆರವಾಗಿ ತ್ವಚೆಯ ಸುಕ್ಕುಗಳನ್ನು ತಡೆಯುತ್ತದೆ. ಉನ್ನತ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಂಶವು ಮೂಳೆಗಳನ್ನು ಗಟ್ಟಿಮುಟ್ಟಾಗಿಸಿ ಕೀಲು ನೋವಿನ ಸಮಸ್ಯೆಯನ್ನು ಉಪಶಮನ ಮಾಡುತ್ತದೆ.
ಅಡುಗೆ ಮಾಡುವ ಸರಿಯಾದ ವಿಧಾನ ಹಾಗೂ ವಹಿಸಬೇಕಾದ ಎಚ್ಚರಿಕೆ
ಸುವರ್ಣಗಡ್ಡೆಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹರಿಳುಗಳಿರುತ್ತವೆ. ಆದ್ದರಿಂದ ಇದನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸದೆ ತಿಂದರೆ ಗಂಟಲಿನಲ್ಲಿ ನವೆ ಅಥವಾ ಕಿರಿಕಿರಿ ಉಂಟಾಗುತ್ತದೆ.
ತಯಾರಿಸುವ ವಿಧಾನ: ಗಡ್ಡೆಯನ್ನು ಸಣ್ಣಗೆ ಕತ್ತರಿಸಿ, ಹುಣಸೆಹಳ್ಳಿ ನೀರು ಅಥವಾ ಮಜ್ಜಿಗೆ ಹಾಗೂ ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಬೇಯಿಸಬೇಕು. ಹುಳಿಯಂಶವು ಗಂಟಲಿನಲ್ಲಿ ಉಂಟಾಗುವ ನವೆಯನ್ನು ಸಂಪೂರ್ಣವಾಗಿ ತಡೆಯುತ್ತದೆ.
ಆಹಾರ ಸೇವನೆ: ಪೈಲ್ಸ್ ಅಥವಾ ಮಲಬದ್ಧತೆ ಇರುವವರು ಕನಿಷ್ಠ ಮಸಾಲೆ ಬಳಸಿ ಪಲ್ಯ ಅಥವಾ ಸಾರು ಮಾಡಿ ಸೇವಿಸುವುದು ಉತ್ತಮ. ಅತಿಯಾದ ಖಾರ ಅಥವಾ ಎಣ್ಣೆ ಬಳಕೆಯನ್ನು ನಿಯಂತ್ರಿಸಬೇಕು.

