ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಆನೆಯೊಂದು ಜೇನು ನೊಣಗಳಿಗೆ ಬೆದರಿ ಪಟ್ಟಣಕ್ಕೆ ನುಗ್ಗಿದೆ. ಇದರಿಂದಾಗಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿದ ಆನೆ ನಂತರ ಗ್ರಾಮಗಳತ್ತ ಹೆಜ್ಜೆ ಹಾಕಿದೆ.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಆನೆ ಓಡಿ ಬರುವುದನ್ನು ಕಂಡ ಜನ ಆತಂಕದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದೊಳಗೆ ಸುತ್ತಾಡಿದ ಆನೆ ಮಲ್ಲಯ್ಯನಪುರದ ಕಡೆಗೆ ತೆರಳಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಯನ್ನು ನಿಯಂತ್ರಿಸಲು ಹರಸಾಹಸ ನಡೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸಮೀಪ ಹುಲಿ ಸೆರೆ ಕೂಂಬಿಂಗ್ ಕಾರ್ಯಾಚರಣೆಗೆ ಬಂಡೀಪುರದ ರಾಂಪುರ ಶಿಬಿರದ ಪಾರ್ಥಸಾರಥಿ ಆನೆಯನ್ನು ಕರೆಯಲಾಗಿತ್ತು. ಕೆರೆಯಲ್ಲಿ ನೀರು ಕುಡಿಸುವ ವೇಳೆ ಮರದಲ್ಲಿದ್ದ ಗೂಡು ಕಟ್ಟಿದ್ದ ಜೇನು ಹುಳಗಳು ಕಚ್ಚಿದ ಪರಿಣಾಮ ಆನೆ ದಿಕ್ಕಾಪಾಲಾಗಿ ಓಡಿದೆ. ಮಾವುತ ಚೇತನ್ ಅವರ ಹಿಡಿತಕ್ಕೆ ಸಿಲುಕದ ಆನೆ ಪಟ್ಟಣಕ್ಕೆ ನುಗ್ಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ನೌಕರರು ಹಿಂಬಾಲಿಸಿಕೊಂಡು ಬಂದು ಕೊನೆಗೆ ಆನೆಯನ್ನು ನಿಯಂತ್ರಿಸಿದ್ದಾರೆ.
