ಬೆಳಗಾವಿ : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಶಿಕ್ಷಣ ಇಲಾಖೆಯ ಸಿಬ್ಬಂದಿ ಅಕ್ಷರಶಃ ಚೆಲ್ಲಾಟವಾಡುತ್ತಿದ್ದಾರೆ. ಪರೀಕ್ಷೆ ಮುಗಿದ ನಂತರ ಅತ್ಯಂತ ಸುರಕ್ಷಿತವಾಗಿ ಜಿಲ್ಲಾ ಕೇಂದ್ರಕ್ಕೆ ತಲುಪಿಸಬೇಕಾದ ಸಾವಿರಾರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು (Answer Sheets), ಬೆಳಗಾವಿಯ ಮೂಡಲಗಿಯಲ್ಲಿ ಸಿಬ್ಬಂದಿಯೊಬ್ಬರು ಅತ್ಯಂತ ಬೇಜವಾಬ್ದಾರಿಯಿಂದ ಸೈಕಲ್ ಮತ್ತು ಬೈಕ್‌ನಲ್ಲಿ ಸಾಗಿಸುತ್ತಿರುವ ಆಘಾತಕಾರಿ ದೃಶ್ಯಗಳು ಮುನ್ನೆಲೆಗೆ ಬಂದಿವೆ. ಪರೀಕ್ಷಾ ಭದ್ರತೆಯ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಉಮಾಬಾಯಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ನಂತರ ಅತ್ಯಂತ ಸುರಕ್ಷಿತವಾಗಿ ಸಾಗಿಸಬೇಕಾದ ಉತ್ತರ ಪತ್ರಿಕೆಗಳನ್ನು (Answer Sheets) ಸಿಬ್ಬಂದಿಯೊಬ್ಬರು ಅತ್ಯಂತ ಬೇಜವಾಬ್ದಾರಿಯಿಂದ ಬೈಕ್‌ನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ
ಸಿಬ್ಬಂದಿಯ ಎಡವಟ್ಟು : ಪರೀಕ್ಷಾ ಸಿಬ್ಬಂದಿ ಎಸ್‌ಆರ್ ಬೆಳಗಲಿ ಮತ್ತು ಓರ್ವ ಡಿ ದರ್ಜೆ ನೌಕರ ಉತ್ತರ ಪತ್ರಿಕೆಗಳನ್ನು ಹಿಡಿದುಕೊಂಡು ಬೈಕ್‌ನಲ್ಲಿ ಸಾಗಿಸಿದ್ದಾರೆ ಪ್ರಶ್ನೆ ಪತ್ರಿಕೆಗಳನ್ನು ನೀಡುವಾಗ ಇರುವಂತಹ ಬಿಗಿ ಭದ್ರತೆ, ಉತ್ತರ ಪತ್ರಿಕೆಗಳನ್ನು ಮರಳಿಸುವಾಗ ಏಕಿಲ್ಲ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ
ಉದ್ಧಟತನದ ವರ್ತನೆ: ವಿಡಿಯೋ ಮಾಡುತ್ತಿರುವವರು ಪ್ರಶ್ನಿಸಿದಾಗ, ಯಾವುದೇ ಭಯವಿಲ್ಲದೆ ಐಡಿ ಕಾರ್ಡ್ ತೋರಿಸುತ್ತಾ, ಬಾಯಲ್ಲಿ ಎಲೆ ಅಡಿಕೆ ಹಾಕಿಕೊಂಡು ಆಟಿಟ್ಯೂಡ್ ಪ್ರದರ್ಶಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ
ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ: ವಿದ್ಯಾರ್ಥಿಗಳು ಹಗಲು ರಾತ್ರಿ ಕಷ್ಟಪಟ್ಟು ಬರೆದ ಪರೀಕ್ಷೆಯ ಪೇಪರ್‌ಗಳನ್ನು ಹೀಗೆ ರಸ್ತೆಯಲ್ಲಿ ಅಸುರಕ್ಷಿತವಾಗಿ ಕೊಂಡೊಯ್ಯುತ್ತಿರುವುದು ಅವರ ಭವಿಷ್ಯದ ಜೊತೆಗಿನ ಚೆಲ್ಲಾಟ ಎಂದು ಆಕ್ರೋಶ ವ್ಯಕ್ತವಾಗಿದೆ

