ಈಜಿಪ್ಟ್‌ನ ಟಿವಿ ನಿರೂಪಕಿ ಸಾರಾ ಖಲೀಫಾ ಸೇರಿದಂತೆ 12 ಆರೋಪಿಗಳಿಗೆ ಕೈರೋ ನ್ಯಾಯಾಲಯ ಶನಿವಾರ ಮರಣದಂಡನೆ ವಿಧಿಸಿದೆ. ದೊಡ್ಡ ಪ್ರಮಾಣದ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ತಯಾರಿಕೆ ಜಾಲದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಅಪರಾಧ ಮತ್ತು ಭದ್ರತಾ ವಿಚಾರಗಳನ್ನು ಕೇಂದ್ರೀಕರಿಸಿದ ‘ಮಿಷನ್ ಇಂಪಾಸಿಬಲ್’ ಎಂಬ ಟಿವಿ ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಅವರು ಹೆಚ್ಚು ಖ್ಯಾತರಾಗಿದ್ದರು. 39 ವರ್ಷದ ಸಾರಾ ಖಲೀಫಾ, ಅಪರಾಧ ಮತ್ತು ಭದ್ರತಾ ವಿಚಾರಗಳ ಕುರಿತು ಪ್ರಸಾರವಾಗುತ್ತಿದ್ದ ‘ಮಿಷನ್ ಇಂಪಾಸಿಬಲ್’ ಕಾರ್ಯಕ್ರಮದ ನಿರೂಪಕಿಯಾಗಿ ಜನಪ್ರಿಯರಾಗಿದ್ದರು. ಅಲ್ಲದೆ, ಅವರು ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್ ಹಾಗೂ ಪಾರ್ಟಿ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ನಿರ್ಮಾಣ ಸಂಸ್ಥೆಯೊಂದನ್ನೂ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈಜಿಪ್ಟ್‌ನ ಸರ್ಕಾರಿ ಸ್ವಾಮ್ಯದ ಅಲ್-ಅಹ್ರಾಮ್ ವರದಿ ಪ್ರಕಾರ, ವಿದೇಶಗಳಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಂಡು ಸಿಂಥೆಟಿಕ್ ಮಾದಕವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಸಂಘಟಿತ ಅಪರಾಧ ಗುಂಪಿನ ಭಾಗವಾಗಿದ್ದಕ್ಕಾಗಿ ಖಲೀಫಾ ಮತ್ತು ಇತರ ಆರೋಪಿಗಳನ್ನು ದೋಷಿಗಳೆಂದು ಘೋಷಿಸಲಾಗಿದೆ. ಗುಂಪಿನ ವಿವಿಧ ಸದಸ್ಯರು ಕಚ್ಚಾ ವಸ್ತುಗಳ ಆಮದು, ಮಾದಕವಸ್ತುಗಳ ತಯಾರಿಕೆ ಹಾಗೂ ವಿತರಣೆಗಳಲ್ಲಿ ತೊಡಗಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ತನಿಖೆ ವೇಳೆ 750 ಕೆಜಿಗೂ ಅಧಿಕ ಮಾದಕವಸ್ತುಗಳು ಹಾಗೂ ಅವುಗಳನ್ನು ತಯಾರಿಸಲು ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಮಾದಕವಸ್ತು ತಯಾರಿಕಾ ಪ್ರಯೋಗಾಲಯಗಳಾಗಿ ಬಳಸಲಾಗುತ್ತಿತ್ತು ಎನ್ನಲಾದ ಎರಡು ಅಪಾರ್ಟ್‌ಮೆಂಟ್‌ಗಳನ್ನೂ ಪತ್ತೆಹಚ್ಚಲಾಗಿದ್ದು, ಪರವಾನಗಿ ಇಲ್ಲದ ಬಂದೂಕುಗಳು ಮತ್ತು ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇತರ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, 7 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಮರಣದಂಡನೆ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸಾರಾ ಖಲೀಫಾ ಅವರ ವಕೀಲರು ತಿಳಿಸಿದ್ದಾರೆ.
ಖಲೀಫಾ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಪ್ರಕರಣದ ಆರಂಭದಿಂದಲೂ ತಾವು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ನ್ಯಾಯಾಲಯದ ವಿಚಾರಣೆಯ ವೇಳೆ, ಈಜಿಪ್ಟ್‌ನ ಮಾದಕವಸ್ತು ನಿಗ್ರಹ ಪ್ರಾಧಿಕಾರದ ಕಚೇರಿಯಲ್ಲಿ ಮಾದಕವಸ್ತುಗಳೊಂದಿಗೆ ತಮ್ಮ ಫೋಟೋ ತೆಗೆಯುವವರೆಗೂ ತಾವು ಅವುಗಳನ್ನು ನೋಡಿರಲಿಲ್ಲ ಎಂದು ನ್ಯಾಯಾಧೀಶರಿಗೆ ತಿಳಿಸಿದ್ದರು. ತಮ್ಮ ಜೀವನದಲ್ಲಿ ಎಂದಿಗೂ ಸಿಗರೇಟ್ ಸೇದಿಲ್ಲ ಎಂದೂ ತನಿಖಾಧಿಕಾರಿಗಳಿಗೆ ಹೇಳಿದ್ದರು.
ಈಜಿಪ್ಟ್ ಮಾಧ್ಯಮಗಳ ಪ್ರಕಾರ, ನ್ಯಾಯಾಲಯದಲ್ಲಿ ಖಲೀಫಾ ಭಾವುಕರಾಗಿ ಕಣ್ಣೀರಿಟ್ಟಿದ್ದು, ತಮ್ಮ ಮೇಲೆ ಕರುಣೆ ತೋರಿಸುವಂತೆ ಮನವಿ ಮಾಡಿದ್ದಾರೆ. “ದಯವಿಟ್ಟು ನನ್ನ ಮಾತನ್ನು ಕೇಳಿ. ನನ್ನ ತಂದೆ-ತಾಯಿ ನನ್ನನ್ನು ಉತ್ತಮ ರೀತಿಯಲ್ಲಿ ಬೆಳೆಸಿದ್ದಾರೆ. ಅವರು ಪ್ರಾರ್ಥನೆ ಮಾಡುವವರು. ನನಗೆ ಮಾದಕವಸ್ತುಗಳ ಹಣದ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಅಲ್-ಅಹ್ರಾಮ್ ವರದಿ ಪ್ರಕಾರ, ಪ್ರಕರಣದಲ್ಲಿ 20 ಸಾಕ್ಷಿಗಳ ಹೇಳಿಕೆಗಳ ಜೊತೆಗೆ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ಒಳಗೊಂಡ ತಾಂತ್ರಿಕ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಆಧಾರವಾಗಿ ಬಳಸಿದೆ. ಇವು ಆರೋಪಿಗಳ ಚಟುವಟಿಕೆಗಳನ್ನು ದಾಖಲಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನಿಖೆಯ ಭಾಗವಾಗಿ 2025ರ ಏಪ್ರಿಲ್‌ನಲ್ಲಿ ಕೈರೋದಲ್ಲಿ ಖಲೀಫಾ ಅವರನ್ನು ಬಂಧಿಸಲಾಗಿತ್ತು. ಅದೇ ವರ್ಷದ ಬಳಿಕ ಅವರ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಲಾಗಿತ್ತು.
ಈಜಿಪ್ಟ್‌ನಲ್ಲಿ ಉದ್ದೇಶಪೂರ್ವಕ ಕೊಲೆ, ಭಯೋತ್ಪಾದನೆ, ಕೆಲವು ಅತ್ಯಾಚಾರ ಪ್ರಕರಣಗಳು ಹಾಗೂ ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಹಲವು ಅಪರಾಧಗಳಿಗೆ ಇನ್ನೂ ಮರಣದಂಡನೆ ಜಾರಿಯಲ್ಲಿದೆ. ಮಾದಕವಸ್ತು ಸಂಬಂಧಿತ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸುವ ಕ್ರಮಕ್ಕೆ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಪ್ರಕಾರ, 2025ರಲ್ಲಿ ಈಜಿಪ್ಟ್‌ನಲ್ಲಿ 492 ಮರಣದಂಡನೆ ತೀರ್ಪುಗಳು ನೀಡಲಾಗಿದ್ದು, ಅದೇ ವರ್ಷ 23 ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಅಂತಾರಾಷ್ಟ್ರೀಯ ಕಾನೂನಿನಡಿ ಉದ್ದೇಶಪೂರ್ವಕವಾಗಿ ವ್ಯಕ್ತಿಯನ್ನು ಕೊಲ್ಲುವ ಅಪರಾಧಗಳಿಗೆ ಮಾತ್ರ ಮರಣದಂಡನೆಯನ್ನು ಸೀಮಿತಗೊಳಿಸಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.
ಇದೇ ವೇಳೆ, ಈಜಿಪ್ಟ್ ಕಮಿಷನ್ ಫಾರ್ ರೈಟ್ಸ್ ಆ್ಯಂಡ್ ಫ್ರೀಡಮ್ಸ್ ಪ್ರಕಾರ, 2025ರಲ್ಲಿ ದೇಶದಲ್ಲಿ 541 ಮರಣದಂಡನೆ ತೀರ್ಪುಗಳು ನೀಡಲಾಗಿದೆ ಎಂದು Independent ವರದಿ ಮಾಡಿದೆ.

