HomeKarnatakaBIG NEWS: ರಾಜ್ಯದ 102 ತಾಲೂಕುಗಳು ಬರ ಪೀಡಿತ: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ

BIG NEWS: ರಾಜ್ಯದ 102 ತಾಲೂಕುಗಳು ಬರ ಪೀಡಿತ: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ

ಬೆಂಗಳೂರು: ರಾಜ್ಯವು ಪ್ರಸ್ತುತ ಸಾಲಿನಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ ಜನತೆ ಕೂಡ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸದನಕ್ಕೆ ವಿವರಿಸಿದ ಅವರು, ನಮ್ಮ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ 758 ಗ್ರಾಮಗಳಿಗೆ 149 ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 714 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ನಗರ ಪ್ರದೇಶದ 18 ಸ್ಥಳೀಯ ಸಂಸ್ಥೆಗಳ 114 ವಾರ್ಡ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಇಲ್ಲಿಯೂ 18 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಪರಿಸ್ಥಿತಿ ತೀವ್ರವಾದರೆ ಮುಂದಿನ ಬೇಸಿಗೆಯಲ್ಲಿ 2,059 ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಹುದು ಎಂದು ಅಂದಾಜು ಮಾಡಿ ಅದಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ 152 ಲಕ್ಷ ಟನ್‌ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. 44 ತಾಲೂಕುಗಳಲ್ಲಿ 25 ವಾರಗಳಿಗೆ ಹಾಗೂ 17 ತಾಲೂಕುಗಳಲ್ಲಿ 20 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಇದರ ನಡುವೆ ನೀರಿನ ಆಸರೆ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ನೀಡಲು ₹25 ಕೋಟಿ ಬಿಡುಗಡೆ ಮಾಡಿದ್ದೇವೆ. ಕೆಎಂಎಫ್‌ ಕಡೆಯಿಂದಲೂ ಕಿಟ್‌ಗಳನ್ನು ನೀಡುತ್ತಿದ್ದೇವೆ. ಮೇವು ಬೆಳೆದ ರೈತರು ಅದನ್ನು ಜೋಪಾನ ಮಾಡಬೇಕೆಂದು ವಿನಂತಿಸಿದ್ದೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಸರ್ಕಾರ ಈಗಾಗಲೇ ರಾಜ್ಯದ 31 ಜಿಲ್ಲೆಗಳಿಗೆ ₹117 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ಪ್ರತೀ ಗ್ರಾಮೀಣ ಕ್ಷೇತ್ರಕ್ಕೆ ತಲಾ ₹1 ಕೋಟಿಯಂತೆ ₹189 ಕೋಟಿ ಬಿಡುಗಡೆ ಮಾಡಿದೆ. ಒಟ್ಟಾರೆ ₹306 ಕೋಟಿಗಳನ್ನು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಿಡುಗಡೆ ಮಾಡಿದ್ದೇವೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಹಣದ ಕೊರತೆಯಿಲ್ಲ ಎಂದು ತಿಳಿಸಿದ್ದಾರೆ.

ಫಸಲ್‌ ಭೀಮಾ ಯೋಜನೆಯಲ್ಲಿ ಈ ಬಾರಿ ದಾಖಲೆ ಮಟ್ಟದಲ್ಲಿ ಕೃಷಿ ಹಾಗೂ ತೋಟಗಾರಿಕೆ ಮಾಡುವ 49 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇದಕ್ಕೆ ಸರ್ಕಾರವೂ ಸಹ ಒತ್ತಾಸೆ ನೀಡಿದೆ. ಬೀಜ ಬಿತ್ತಲು ಸಾಧ್ಯವಾಗದಿದ್ದರೆ Prevented sowing ಎಂಬ ಕೆಟಗರಿಯಡಿ ವಿಮಾ ಪರಿಹಾರ ನೀಡಲು ಸಾಧ್ಯವಿದೆ. ಅದರಲ್ಲಿನ ಅವಕಾಶಗಳನ್ನು ಬಳಸಿಕೊಂಡು ಸಹ ನೋಂದಣಿ ಮಾಡಲು ಉತ್ತೇಜಿಸಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ನಾನು ಬೆಳಗಾವಿ, ಕಲಬುರಗಿ ಮತ್ತು ಬೆಂಗಳೂರು ಕಂದಾಯ ವಿಭಾಗಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದ್ದೇವೆ. ರೈತರ ತೋಟ, ಹೊಲ ಗದ್ದೆಗಳನ್ನು ಪರಿಶೀಲಿಸಿದ್ದೇವೆ. ಸ್ವತಃ ನಾನು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ನಮ್ಮ ಉಳಿದ ಸಚಿವರುಗಳು ಜವಾಬ್ದಾರಿ ನೀಡಿರುವ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದರು.

ಭಾರತೀಯ ಹವಾಮಾನ ಇಲಾಖೆಯು ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ನೀಡಿದ ಮುನ್ಸೂಚನೆಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು, ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದೇವೆ. ಮುಖ್ಯವಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದು, ಮಳೆಯ ಸ್ಥಿತಿಗತಿಗಳನ್ನಾಧರಿಸಿ ಸೂಕ್ತ ಬೆಳೆ ತಳಿಗಳನ್ನು ನಿರ್ಧಾರ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನಿಗಾವಹಿಸಬೇಕು. ಕಲುಷಿತ ನೀರಿನಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳು, ಸಾಂಕ್ರಾಮಿಕ ರೋಗಗಳು ಉದ್ಭವವಾಗದಂತೆ ನಿಗಾವಹಿಸಬೇಕು ಮತ್ತು ಜನರು ನಿರುದ್ಯೋಗದ ಕಾರಣದಿಂದ ಗುಳೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಬೇಕೆಂದು ನಿರ್ದೇಶನಗಳನ್ನು ನೀಡಿ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಭಾಯಿಸುತ್ತಿದೆ ಎಂದರು.

ಬರದ ಕಾರಣದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ವಿಬಿ ಜಿ ರಾಮ್‌ ಜಿ ಯೋಜನೆಯಡಿ 16,460 ಕಾಮಗಾರಿಗಳನ್ನು ಕೈಗೊಂಡು ಜುಲೈ 1 ರಿಂದ ಈವರೆಗೆ 65.19 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದೇವೆ ಎಂದರು.

ಬರ ಘೋಷಣೆ ಮಾಡುವುದಕ್ಕೆ ಕೇಂದ್ರ ಸರ್ಕಾರವು 2020ರಲ್ಲಿ ಬಿಡುಗಡೆಗೊಳಿಸಿರುವ ಬರ ನಿಯಮಗಳು ಅಡ್ಡಿಯಾಗಿದೆ. ಈಗ ಅರ್ಹತೆ ಪಡೆದಿರುವ 102 ತಾಲೂಕುಗಳ ಗ್ರೌಂಡ್‌ ಟ್ರೂಥಿಂಗ್‌ ಅನ್ನು ಮುಗಿಸಿದ್ದೇವೆ. ಇದನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್‌ ಸಲ್ಲಿಸಲಾಗುವುದು. ಇದು ನಿರಂತರವಾದ ಪ್ರಕ್ರಿಯೆ ಆಗಿರುವುದರಿಂದ ಉಳಿದ ತಾಲೂಕುಗಳ ಸ್ಥಿತಿಗತಿಗಳನ್ನೂ ಅವಲೋಕಿಸಿಕೊಂಡು ಗ್ರೌಂಡ್‌ ಟ್ರೂಥಿಂಗ್‌ ಮಾಡಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ೆಂದರು

ಕೇಂದ್ರ ಸರ್ಕಾರವು ಹೊಸದಾಗಿ ಅಳವಡಿಸಿರುವ ಬರ ನಿರ್ವಹಣೆ ಕೈಪಿಡಿಯ ಅನೇಕ ಮಾರ್ಗಸೂಚಿಗಳು ರೈತರಿಗೆ ಪೂರಕವಾಗಿಲ್ಲ. ಆದ್ದರಿಂದ ಅವುಗಳನ್ನು ಸಡಿಲಗೊಳಿಸುವಂತೆ ಪ್ರಧಾನಿಗಳು ಹಾಗೂ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರುಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೇವೆ. ಈ ವಿಚಾರದಲ್ಲಿ ಸರ್ಕಾರದ ನೆರವಿಗೆ ಬರಬೇಕೆಂದು ವಿರೋಧ ಪಕ್ಷದ ಸದಸ್ಯರಲ್ಲಿಯೂ ನಾವು ಮನವಿ ಮಾಡಿದ್ದೇವೆ ಎಂದರು.

ನಮ್ಮ ಸರ್ಕಾರವು ಬರವನ್ನು ಗಂಭೀರವಾಗಿ ಪರಿಗಣಿಸಿದ್ದು, ಜನ-ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದ ಹಾಗೆ ನಿರ್ವಹಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular