ಇಂದು ( ಮೇ 21 ) ಮಲಯಾಳಂ ಚಿತ್ರರಂಗದ ಅತಿ ಯಶಸ್ವಿ ಥ್ರಿಲ್ಲರ್ ಸಿನಿಮಾಗಳ ನಿರ್ದೇಶಕ ಜಿತು ಜೋಸೆಫ್ ನಿರ್ದೇಶನದ ‘ದೃಶ್ಯಂ 3’ ಬಿಡುಗಡೆಗೊಳ್ಳುತ್ತಿದೆ.
ದೃಶ್ಯಂ ಹಾಗೂ ದೃಶ್ಯಂ 2 ಎರಡೂ ಚಿತ್ರಗಳು ನಿರೀಕ್ಷೆಗೂ ಮೀರಿದ ಯಶಸ್ಸನ್ನು ತಂದುಕೊಟ್ಟ ಕಾರಣ ಈ ಚಿತ್ರ ಯಾವಾಗ ಬರಲಿದೆ ಎಂದು ಪ್ರೇಕ್ಷಕರು ಕಾತರರಾಗಿ ಕಾಯುತ್ತಿದ್ದರು.
ತನ್ನ ಕುಟುಂಬಕ್ಕೆ ಕೆಡಕನ್ನುಂಟುಮಾಡುವ ವ್ಯಕ್ತಿಯ ಕೊಲೆ ಮಾಡುವ ಜಾರ್ಜ್ ಕುಟ್ಟಿ ಮೊದಲ ಚಿತ್ರದಲ್ಲಿ ಶವವನ್ನು ಜಾಣ್ಮೆಯಿಂದ ಬಚ್ಚಿಟ್ಟು ಪಾರಾಗುತ್ತಾನೆ. ಚಿತ್ರದುದ್ದಕ್ಕೂ ಜಾರ್ಜ್ ಕುಟ್ಟಿ ಪೊಲೀಸರಿಗೆ ಯಾವಾಗ ಸಿಕ್ಕಿಬೀಳಲಿದ್ದಾನೋ ಎಂಬ ಕುತೂಹಲ ಸಾಗುತ್ತಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಗೆಯೇ ಎರಡನೇ ಭಾಗದಲ್ಲೂ ಜಾರ್ಜ್ ಕುಟ್ಟಿ ತನ್ನ ಬುದ್ದಿವಂತಿಕೆಯಿಂದ ಶವವನ್ನು ಹೂತಿದ್ದ ಜಾಗದಿಂದ ಬದಲಿಸಿ ಬೇರೆಡೆಗೆ ಸಾಗಿಸಿ ಅಲ್ಲಿ ಮತ್ತೊಂದು ಶವವನ್ನು ಇರಿಸಿ ತನಗೂ ಆ ಕೊಲೆಗೂ ಸಂಬಂಧವಿಲ್ಲ ಎಂಬುದನ್ನು ನ್ಯಾಯಾಲಯವೇ ತೀರ್ಮಾನ ಮಾಡುವ ಹಾಗೆ ಮಾಡಿಬಿಡುತ್ತಾನೆ. ಈ ಕಥೆಯೂ ಸಹ ಅಷ್ಟೇ ರೋಚಕವಾಗಿತ್ತು.
ಹೀಗೆ ಎರಡು ಬಾರಿ ಥ್ರಿಲ್ಲರ್ ಕಥೆಯನ್ನು ಹೇಳಿ ಗೆದ್ದಿರುವ ತಂಡ ಇದೀಗ ಅದರ ಮುಂದುವರಿದ ಭಾಗವನ್ನು ತೆರೆ ಮೇಲೆ ತರುತ್ತಿದ್ದು, ಈ ಬಾರಿಯಾದರೂ ಜಾರ್ಜ್ ಕುಟ್ಟಿ ಸಿಕ್ಕಿಬೀಳಲಿದ್ದಾನಾ ಅಥವಾ ಮತ್ತೊಂದು ಮೆಗಾ ಪ್ಲಾನ್‌ನೊಂದಿಗೆ ಪಾರಾಗಲಿದ್ದಾನಾ ಎಂಬ ಪ್ರಶ್ನೆ ಎದ್ದಿದೆ.
ಅಂದಹಾಗೆ ದೃಶ್ಯಂ ಹಾಗೂ ದೃಶ್ಯಂ 2 ಎರಡೂ ಚಿತ್ರಗಳೂ ಸಹ ಕನ್ನಡದಲ್ಲಿ ರಿಮೇಕ್ ಆಗಿದ್ದವು. ಆದರೆ ಈ ಬಾರಿ ದೃಶ್ಯಂ 3 ಚಿತ್ರವನ್ನು ಕನ್ನಡದಲ್ಲಿಯೂ ಡಬ್ ಮಾಡಿ ರಾಜ್ಯದ ಹಲವು ಪ್ರಮುಖ ನಗರಗಳ ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಹಿಂದಿನಂತೆ ರಿಮೇಕ್ ಕಷ್ಟ ಎನ್ನಬಹುದು.
ಹೌದು, ನಿರ್ದೇಶಕ ಪಿ ವಾಸು ಹಾಗೂ ರವಿಚಂದ್ರನ್ ಕಾಂಬಿನೇಷನ್‌ನಲ್ಲಿ ರಿಮೇಕ್ ಆಗಿದ್ದವು. ಆದರೆ ಈ ಬಾರಿ ನೇರವಾಗಿ ಕನ್ನಡಕ್ಕೆ ದೃಶ್ಯಂ 3 ಚಿತ್ರವನ್ನು ಡಬ್ ಮಾಡುತ್ತಿರುವ ಕಾರಣ ರಾಜೇಂದ್ರ ಪೊನ್ನಪ್ಪನ ಕಥೆ ಸೆಟ್ಟೇರುವುದು ಅನುಮಾನ ಎನ್ನಬಹುದು. ಕನ್ನಡ ಡಬಿಂಗ್ ಪ್ರದರ್ಶನಗಳ ಸಂಖ್ಯೆ ಕಡಿಮೆ ಇದೆ ಎನ್ನಬಹುದಾದರೂ ಒಟಿಟಿಗೆ ಬಂದ ಮೇಲಂತೂ ಚಿತ್ರವನ್ನು ಕನ್ನಡಿಗರು ಕನ್ನಡದಲ್ಲಿಯೇ ವೀಕ್ಷಿಸಲಿದ್ದು, ರಿಮೇಕ್ ಅಗತ್ಯ ಬೀಳುವುದಿಲ್ಲ ಹಾಗೂ ರವಿಚಂದ್ರನ್‌ಗೆ ಮತ್ತೊಂದು ಹಿಟ್ ಚಾನ್ಸ್ ಸಿಗುವುದಿಲ್ಲ ಎನ್ನಬಹುದು.

