ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3 : ದಿ ಕನ್ಕ್ಲೂಷನ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳ ಸೃಷ್ಟಿ ಮುಂದುವರಿಸಿದೆ. ಹಬ್ಬದ ಶುಭದಿನದಂದು ತೆರೆಕಂಡ ಈ ಚಿತ್ರವು ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಭಾರತದಲ್ಲಿ ಬರೋಬ್ಬರಿ ೧೭೬.೫೦ ಕೋಟಿ ರೂಪಾಯಿ ನಿವ್ವಳ (ನೆಟ್) ಕಲೆಕ್ಷನ್ ಮಾಡುವ ಮೂಲಕ ಪ್ರಸಕ್ತ ವರ್ಷದ ಎರಡನೇ ಅತಿ ದೊಡ್ಡ ವೀಕೆಂಡ್ ಓಪನರ್ ಆಗಿ ಹೊರಹೊಮ್ಮಿದೆ.
ಚಿತ್ರದ ಗಳಿಕೆಯ ಅಂಕಿಅಂಶಗಳನ್ನು ನೋಡುವುದಾದರೆ, ಬಿಡುಗಡೆಯಾದ ಮೊದಲ ದಿನವಾದ ಶುಕ್ರವಾರ 62 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಶನಿವಾರ 53.50 ಕೋಟಿ ಹಾಗೂ ಮೂರನೇ ದಿನವಾದ ಭಾನುವಾರ 61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 211.80 ಕೋಟಿ ರೂಪಾಯಿಗೇರಿದೆ. ಇನ್ನು ವಿದೇಶಗಳಲ್ಲೂ ಭಾರಿ ಸದ್ದು ಮಾಡುತ್ತಿರುವ ‘ದೃಶ್ಯಂ ೩’, ವಿದೇಶಿ ಮಾರುಕಟ್ಟೆಯಿಂದ ಒಟ್ಟು 61 ಕೋಟಿ ರೂಪಾಯಿ ಕಲೆಹಾಕಿದ್ದು, ಜಾಗತಿಕವಾಗಿ (ವರ್ಲ್ಡ್ವೈಡ್) 272.80 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಧುರಂಧರ್ 2 ಚಿತ್ರದ ನಂತರದ ಸ್ಥಾನ ಪಡೆದುಕೊಂಡಿದೆ.
ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್ ಅವರೊಂದಿಗೆ ಜೈದೀಪ್ ಅಹ್ಲಾವತ್, ಟಬು, ಶ್ರಿಯಾ ಶರಣ್, ರಜತ್ ಕಪೂರ್, ಪ್ರಕಾಶ್ ರಾಜ್ ಮತ್ತು ಇಶಿತಾ ದತ್ತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದಿನ ಎರಡು ಭಾಗಗಳು ಮಲಯಾಳಂ ಮೂಲದ ಕಥೆಯಾಗಿದ್ದರೆ, ಈ ಮೂರನೇ ಭಾಗವನ್ನು ಸಂಪೂರ್ಣ ಸ್ವತಂತ್ರ ಕಥೆಯೊಂದಿಗೆ ನಿರ್ಮಿಸಲಾಗಿದ್ದು, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.

