ಬೆಂಗಳೂರು : ಹೊಸ ಸಿನಿಮಾಗಳನ್ನು ಉಚಿತವಾಗಿ ನೋಡಲು ಹೋಗುವವರೇ ಎಚ್ಚರ! ಸಿನೆಮಾ ಕ್ರೇಜ್ ಅನ್ನು ಬಳಸಿಕೊಂಡು ಸೈಬರ್ ವಂಚಕರು ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ‘ಬಾರ್ಡರ್-2’ ಚಿತ್ರವನ್ನು ಉಚಿತವಾಗಿ ಡೌನ್ಲೋಡ್ ಮಾಡಲು ಹೋದ ಕಾಂಟ್ರಾಕ್ಟರ್ ಒಬ್ಬರು ಬರೋಬ್ಬರಿ 56,000 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ವಂಚನೆ ನಡೆದಿದ್ದು ಹೇಗೆ..?
ಬಾಲಕೃಷ್ಣ ಎಂಬುವವರಿಗೆ ಅಪರಿಚಿತ ನಂಬರ್ನಿಂದ ವಾಟ್ಸಾಪ್ ಮೂಲಕ ‘ಬಾರ್ಡರ್-2’ ಸಿನಿಮಾದ ಎಪಿಕೆ (APK) ಫೈಲ್ ಲಿಂಕ್ ಬಂದಿತ್ತು.ಬಾಲಕೃಷ್ಣ ಅವರು ಆ ಲಿಂಕ್ ಕ್ಲಿಕ್ ಮಾಡಿ ಸಿನಿಮಾ ಡೌನ್ಲೋಡ್ ಮಾಡಲು ಮುಂದಾದಾಗ, ಸೈಬರ್ ಕಳ್ಳರು ಅವರ ಫೋನ್ಗೆ ಪ್ರವೇಶ ಪಡೆದು ಖಾಸಗಿ ಡೇಟಾವನ್ನು ಕದ್ದಿದ್ದಾರೆ.ಆಶ್ಚರ್ಯಕರ ಸಂಗತಿಯೆಂದರೆ, ಯಾವುದೇ ಓಟಿಪಿ (OTP) ಕೇಳದೆಯೇ ವಂಚಕರು ಬಾಲಕೃಷ್ಣ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 56 ಸಾವಿರ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾರೆ.
ಈ ಕುರಿತು ಸಂತ್ರಸ್ತ ಬಾಲಕೃಷ್ಣ ಅವರು ಬೆಂಗಳೂರಿನ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ “ನಿಮ್ಮ ಎಟಿಎಂ ಕಾರ್ಡ್ ಕಳುಹಿಸಲು ವಿಳಾಸ ನೀಡಿ” ಎಂದು ಹುಸಿ ಕರೆಗಳು ಬಂದಿದ್ದವು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರ ಎಚ್ಚರಿಕೆ :ಅಪರಿಚಿತರು ಕಳುಹಿಸುವ ಎಪಿಕೆ (APK) ಫೈಲ್ ಅಥವಾ ಶಾರ್ಟ್ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿಉಚಿತ ಸಿನಿಮಾ ಅಥವಾ ಅತಿಯಾದ ಆಫರ್ಗಳ ಆಸೆಗೆ ಬೀಳಬೇಡಿ. ಮೊಬೈಲ್ನಲ್ಲಿ ಅನುಮಾನಾಸ್ಪದ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
ನಿಮ್ಮ ಫೋನ್ಗೆ ಇಂತಹ ಅನುಮಾನಾಸ್ಪದ ಲಿಂಕ್ಗಳು ಬಂದರೆ ಕೂಡಲೇ ಅದನ್ನು ಡಿಲೀಟ್ ಮಾಡಿ ಮತ್ತು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.

