ಮದುವೆಯಾಗಿದ್ದೇನೆಂದು ಹೇಳಿಕೊಂಡು ಲಿವ್‌-ಇನ್ ಸಂಬಂಧಕ್ಕೆ ಮುಂದಾದರೆ ಅದು ವಂಚನೆಯಲ್ಲ: ಹೈಕೋರ್ಟ್ ಅಭಿಮತ

ತನಗೆ ಹಿಂದೆ ಮದುವೆಯಾಗಿತ್ತು ಎಂದು ಹೇಳುವ ಮೂಲಕ ಲಿವ್‌-ಇನ್ ಸಂಬಂಧ ಶುರು ಮಾಡಿದಲ್ಲಿ ಅದು ವಂಚನೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತಿಳಿಸಿದೆ.

ಮದುವೆಯಾಗುವುದಾಗಿ ತಿಳಿಸಿ, 11 ತಿಂಗಳ ಕಾಲ ತನ್ನೊಂದಿಗೆ ಲಿವ್‌-ಇನ್ ಸಂಗಾತಿಯಾಗಿದ್ದ ವ್ಯಕ್ತಿಯೊಬ್ಬನ ಮೇಲೆ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಸಂಬಂಧ ಮೇಲ್ಮನವಿ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಬದಲಿಸಿದೆ.

ಹೊಟೇಲ್‌ ಒಂದರಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುವ ಎದುರುದಾರರು, ಮದುವೆಯಾಗುವುದಾಗಿ ಹೇಳಿಕೊಂಡು ಅರ್ಜಿದಾರರೊಂದಿಗೆ ಲಿವ್‌-ಇನ್ ಸಾಂಗತ್ಯ ಬೆಳೆಸಿದ ಕಾರಣಕ್ಕೆ ಆತನಿಗೆ 10 ಲಕ್ಷ ರೂ.ಗಳ ದಂಡವನ್ನು ಕೆಳಹಂತದ ನ್ಯಾಯಾಲಯ ವಿಧಿಸಿತ್ತು. ಲೈಂಗಿಕ ಲಾಭಕ್ಕಾಗಿ ಅರ್ಜಿದಾರರನ್ನು ನಂಬಿಸಿದ್ದಾರೆ ಎಂದು ಸಾಬೀತು ಪಡಿಸಲು ಆಗದಿರುವ ಕಾರಣ ಭಾರತೀಯ ದಂಡ ಸಂಹಿತೆಯ 415ನೇ ಸೆಕ್ಷನ್‌ನ ಅಡಿ ಇದನ್ನು ವಂಚನೆ ಎನ್ನಲು ಬರುವುದಿಲ್ಲ ಎಂದು ನ್ಯಾಯಾಧೀಶ ಸಿದ್ಧಾರ್ಥ ರಾಯ್ ಚೌಧರಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ, ಸಂತ್ರಸ್ತೆಯು ತನ್ನ ಲಿವ್‌-ಇನ್ ಸಂಗಾತಿಗೆ ಅದಾಗಲೇ ಮದುವೆಯಾಗಿ ಮಕ್ಕಳಿರುವ ವಿಚಾರವನ್ನು ಅರಿವಿದ್ದೇ ಒಪ್ಪಿಕೊಂಡ ಕಾರಣ ಇಲ್ಲಿ ವಂಚನೆ ಎನ್ನಲು ಬರುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಒಂದು ವೇಳೆ ಸತ್ಯಾಂಶವನ್ನು ಆತ ಮುಚ್ಚಿಟ್ಟಿದ್ದರೆ ಇದನ್ನು ವಂಚನೆ ಎಂದು ಒಪ್ಪಬಹುದಿತ್ತು ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣ ಸಂಬಂಧ ಆಲಿಕೆ ನಡೆಸಿದ್ದ ಅಲಿಪೂರ್‌ ನ್ಯಾಯಾಲಯವು, ಎದುರುದಾರರಿಗೆ 10 ಲಕ್ಷ ರೂ. ದಂಡ ವಿಧಿಸಿತ್ತು. ಇದರಲ್ಲಿ 8 ಲಕ್ಷ ರೂ.ಗಳನ್ನು ಸಂತ್ರಸ್ತೆಗೂ, 2 ಲಕ್ಷ ರೂಗಳನ್ನು ರಾಜ್ಯ ಸರ್ಕಾರಕ್ಕೂ ನೀಡಲು ಆದೇಶಿಸಲಾಗಿತ್ತು. ಮದುವೆಯಾಗುವುದಾಗಿ ಹೇಳಿಕೊಂಡು ಆಕೆಯೊಂದಿಗೆ 11 ತಿಂಗಳು ಕಳೆದ ನಂತರ ತನ್ನ ಮಾತಿಗೆ ತಪ್ಪಿದ ಕಾರಣಕ್ಕೆ ಅಲಿಪೋರ್‌ ಕೋರ್ಟ್ ಆಪಾದಿತನಿಗೆ ಈ ಶಿಕ್ಷೆ ವಿಧಿಸಿತ್ತು.

ಹೋಟೆಲೊಂದರಲ್ಲಿ ಕೆಲಸಕ್ಕಾಗಿ ಸಂದರ್ಶನಕ್ಕೆಂದು ತೆರಳಿದ್ದ ವೇಳೆ ಅಲ್ಲಿ ಫ್ರಂಟ್-ಡೆಸ್ಕ್ ಮ್ಯಾನೇಜರ್‌ ಆಗಿದ್ದ ವ್ಯಕ್ತಿಯನ್ನು ಸಂತ್ರಸ್ತೆ ಭೇಟಿಯಾಗಿದ್ದಾರೆ. ಇಬ್ಬರ ನಡುವೆ ಮೊಬೈಲ್ ನಂಬರ್‌ ವಿನಿಮಯವಾಗಿದ್ದು, ಪರಿಚಯ ಸಲುಗೆಗೆ ತಿರುಗಿದೆ. ತನಗಾಗಲೇ ಮದುವೆಯಾಗಿದ್ದು, ವೈವಾಹಿಕ ಜೀವನ ಹದಗೆಟ್ಟಿದೆ ಎಂದು ಆಪಾದಿತ ತಿಳಿಸಿದ ಬಳಿಕ ಸಂತ್ರಸ್ತೆ ಈ ಸಂಬಂಧಕ್ಕೆ ಒಪ್ಪಿದ್ದಾರೆ.

ಕೆಲ ದಿನಗಳ ಬಳಿಕ ಆಪಾದಿತ ತನ್ನ ಪತ್ನಿಯನ್ನು ಭೇಟಿ ಮಾಡಲು ಮುಂಬಯಿಗೆ ತೆರಳಿದ್ದಾರೆ. ಅಲ್ಲಿಂದ ಮರಳಿ ಬರುತ್ತಲೇ, ವಿಚ್ಛೇದನ ಪಡೆಯುವ ತನ್ನ ನಿರ್ಧಾರ ಬದಲಿಸಿದ್ದಾಗಿ ಆಪಾದಿತ ಸಂತ್ರಸ್ತೆಗೆ ತಿಳಿಸುತ್ತಾರೆ.

ತನ್ನ ಹಿಂದಿನ ವೈವಾಹಿಕ ಸಂಬಂಧವನ್ನು ಕಡಿದುಕೊಂಡು ತನ್ನೊಂದಿಗೆ ಮದುವೆಯಾಗುವುದಾಗಿ ಆಪಾದಿತ ತಿಳಿಸಿದ್ದಾಗಿ ಸಂತ್ರಸ್ತೆ ಇದೇ ವೇಳೆ ಕೋರ್ಟ್‌ನಲ್ಲಿ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read