ದೊಡ್ದಬಳ್ಳಾಪುರ: ಮನೆ ಬಳಿ ತಮ್ಮ ಪಾಡಿಗೆ ತಾವು ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇಗುಲದ ಬಳಿ ಈ ಘಟನೆ ನಡೆದಿದೆ. ಮಕ್ಕಳ ಪೋಷಕರು ಗಾರ್ಮೆಂಟ್ಸ್ ಕೆಲಸಕ್ಕೆಂದು ಹೋಗಿದ್ದರು. ಮಕ್ಕಳಿಬ್ಬರನ್ನೇ ಮನೆಯಲ್ಲಿ ಬಿಟ್ಟು ತಂದೆ-ತಾಯಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಕ್ಕಳಿಬ್ಬರು ಮನೆ ಬಳಿ ಆಟವಾಡುತ್ತಿದ್ದರು. ಸ್ಥಳಕ್ಕೆ ಬಂದ ದುರುಳರು ಮಕ್ಕಳು ಎಂಬುದನ್ನೂ ನೋಡದೇ ಮೈ-ಕೈ- ಕಾಲುಗಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.
ಮೂರು ಹಾಗೂ ಏಳು ವರ್ಷದ ಇಬ್ಬರು ಮಕ್ಕಳ ಮೇಲೆ ಅಪರಿಚಿತರು ಮನಬಂದಂತೆ ಹೊಡೆದಿದ್ದು, ಓರ್ವ ಮಗುವಿನ ಕೈ ಮುರಿದು ಹೋಗಿದೆ. ಗಂಭಿರವಾಗಿ ಗಾಯಗೊಂಡಿರುವ ಮಕ್ಕಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಪೋಷಕರಿಗೆ ತಿಳಿಸಿದ್ದಾರೆ.
ಮಕ್ಕಳ ಮೇಲಿನ ಹಲ್ಲೆ ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಮಕ್ಕಳ ಹಕ್ಕುಳ ರಕ್ಷಣಾ ಆಯೋಗಕ್ಕೂ ದೂರು ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿರುವ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು ಹಲ್ಲೆಗೊಳಗಾದ ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ. ಹಲ್ಲೆ ನಡೆಸಿದ ಅಪರಿಚಿತರ ಪತ್ತೆಗೆ ಶೋಧ ನಡೆಸಲಾಗಿದೆ.

