ಹೈದರಾಬಾದ್: ಮನೆಯಲ್ಲಿ ಬೆಕ್ಕು ಸಾಕುವುದು ಬೇಡ ಎಂದು ಕುಟುಂಬದವರು ಹೇಳಿದ್ದಕ್ಕೆ ಮನನೊಂದ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
23 ವರ್ಷದ ಟಿ.ಪ್ರಿನ್ಸಿ ಅಲಿಯಾಸ್ ಶ್ರೇಷ್ಠ ಆತ್ಮಹತ್ಯೆಗೆ ಶರಣಾದ ವೈದ್ಯೆ. ಹೈದರಾಬಾದ್ ನ ಅಲ್ವಾರ್ ನ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಬಿಬಿಎಸ್ ಮುಗಿಸಿದ್ದ ಶ್ರೇಷ್ಠ, ಉನ್ನತ ವ್ಯಾಸಂಗಕ್ಕಾಗಿ ತಯಾರಿ ನಡೆಸಿದ್ದರು. ಕಳೆದ ಮೂರು ತಿಂಗಳಿಂದ ಬೆಕ್ಕನ್ನು ಸಾಕುತ್ತಿದ್ದರು.
ಶ್ರೇಷ್ಠಾಳ ಪೋಷಕರು ಬೆಕ್ಕನ್ನು ಸಾಕುವುದು ಬೇಡ ಎಂದು ತೀವ್ರವಾಗಿ ವಿರೋಧಿಸಿದ್ದರು. ಇದೇ ಕಾರಣಕ್ಕೆ ಶ್ರೇಷ್ಠಾ ಹಾಗೂ ಪೋಷಕರ ನಡುಬ್ವೆ ಜಗಳವಾಗಿತ್ತು. ಇದರಿಂದ ಮನನೊಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಶ್ರೇಷ್ಠಾ ತನ್ನ ತಾಯಿ ಹಾಗೂ ಅಜ್ಜಿಯ ಜೊತೆ ವಾಸವಾಗಿದ್ದರು. ಕೆಲ ವಾರಗಳ ಹಿಂದೆ ಬೆಕ್ಕೊಂದನ್ನು ಮನೆಗೆ ತಂದಿದ್ದರು. ಬೆಕ್ಕು ಮನೆಗೆ ತಂದ ಬಳಿಕ ಶ್ರೇಷ್ಠಾ ನಿರಂತರವಾಗಿ ಶೀತ, ಕೆಮ್ಮಿನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಬೆಕ್ಕು ಸಾಕುವುದು ಬೇಡ ಎಂದು ಮನೆಯವರು ಹೇಳಿದ್ದರು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯೆಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

