ಬೆಂಗಳೂರು: ನಿರಂತರವಾಗಿ ಎಲುಬು ನೋವು, ಸಣ್ಣ ಕೆಲಸಕ್ಕೂ ಆಯಾಸ, ಕಾಲುಗಳಲ್ಲಿ ದುರ್ಬಲತೆ ಕಾಣಿಸುತ್ತಿದೆಯೇ? ಈ ಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸಬೇಡಿ. ಇವು ಮಲ್ಟಿಪಲ್ ಮೈಲೋಮಾ (Multiple Myeloma) ಎಂಬ ಅಪಾಯಕಾರಿ ರಕ್ತದ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳಾಗಿರಬಹುದು.
ಹೌದು. ಮಲ್ಟಿಪಲ್ ಮೈಲೋಮಾ ಎನ್ನುವುದು ಮೂಳೆ ಮಜ್ಜೆಯಲ್ಲಿರುವ ಪ್ಲಾಸ್ಮಾ ಕೋಶಗಳಿಗೆ ತಗುಲುವ ಕ್ಯಾನ್ಸರ್. ಸಾಮಾನ್ಯವಾಗಿ ಈ ಪ್ಲಾಸ್ಮಾ ಕೋಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರತಿರಕ್ಷಕಗಳನ್ನು (ಆಂಟಿಬಾಡಿ) ಉತ್ಪಾದಿಸುತ್ತವೆ. ಆದರೆ ಈ ಕ್ಯಾನ್ಸರ್ ಬಂದಾಗ ಅಸಹಜ ಪ್ಲಾಸ್ಮಾ ಕೋಶಗಳು ನಿಯಂತ್ರಣವಿಲ್ಲದೆ ಹೆಚ್ಚಾಗಿ ಬೆಳೆಯುತ್ತವೆ. ಇದರಿಂದ ಆರೋಗ್ಯಕರ ರಕ್ತಕಣಗಳ ಉತ್ಪಾದನೆ ಕುಂಠಿತವಾಗುತ್ತದೆ.
ಈ ಅಸಹಜ ಕೋಶಗಳು “ಎಂ-ಪ್ರೋಟೀನ್ (M-Protein)” ಎಂಬ ಅಸಾಮಾನ್ಯ ಪ್ರೋಟೀನ್ ಉತ್ಪಾದಿಸುತ್ತವೆ. ಇದು ಕಿಡ್ನಿಗೆ ಹಾನಿ, ಎಲುಬುಗಳ ದುರ್ಬಲತೆ, ರೋಗನಿರೋಧಕ ಶಕ್ತಿ ಕುಸಿತ ಹಾಗೂ ಕ್ಯಾನ್ಸರ್ ಹರಡುವಿಕೆಗೆ ಕಾರಣವಾಗುತ್ತದೆ.ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯಕೀಯ ಆಂಕಾಲಜಿ ಮತ್ತು ಹೆಮಟೋ-ಆಂಕಾಲಜಿ ತಜ್ಞೆ ಡಾ. ವೈಷ್ಣವಿ ಜೋಶಿ ಅವರು ಈ ಕಾಯಿಲೆಯ ಲಕ್ಷಣಗಳು, ಕಾರಣಗಳು ಹಾಗೂ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದ್ದಾರೆ.
ಪ್ರಮುಖ ಲಕ್ಷಣಗಳು
- ನಿರಂತರ ಎಲುಬು ನೋವು, ವಿಶೇಷವಾಗಿ ಬೆನ್ನು ಹಾಗೂ ಪಕ್ಕೆಲುಬುಗಳಲ್ಲಿ.
- ಸಣ್ಣ ಕೆಲಸಕ್ಕೂ ತೀವ್ರ ಆಯಾಸ.
- ಪದೇ ಪದೇ ಸೋಂಕುಗಳು ಕಾಣಿಸಿಕೊಳ್ಳುವುದು.
- ಸಣ್ಣ ಗಾಯಕ್ಕೂ ರಕ್ತಸ್ರಾವ ಅಥವಾ ನೀಲಿ ಕಲೆಗಳು ಮೂಡುವುದು.
- ಮೂತ್ರಪಿಂಡದ ಕಾರ್ಯಕ್ಷಮತೆ ಕುಸಿತ.
- ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ ಅಥವಾ ದುರ್ಬಲತೆ.
- ಎಲುಬುಗಳು ಸುಲಭವಾಗಿ ಮುರಿಯುವುದು.
- ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುವುದು.
ಕಾರಣಗಳು ಮತ್ತು ಅಪಾಯದ ಅಂಶಗಳು
ಮೈಲೋಮಾಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಕೆಲವು ಅಂಶಗಳು ಇದರ ಅಪಾಯವನ್ನು ಹೆಚ್ಚಿಸುತ್ತವೆ.
- ವಯಸ್ಸಾದವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
- ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
- ಕುಟುಂಬದಲ್ಲಿ ಈ ಕಾಯಿಲೆಯ ಇತಿಹಾಸ ಇದ್ದರೆ ಅಪಾಯ ಹೆಚ್ಚು.
- ಕೆಲವು ರಾಸಾಯನಿಕಗಳು ಅಥವಾ ವಿಕಿರಣ (Radiation) ಸಂಪರ್ಕ.
ರೋಗ ಪತ್ತೆಗೆ ಮಾಡುವ ಪರೀಕ್ಷೆಗಳು
ವೈದ್ಯರು ಮೈಲೋಮಾ ದೃಢೀಕರಿಸಲು ಈ ಪರೀಕ್ಷೆಗಳನ್ನು ಮಾಡುತ್ತಾರೆ.
- ರಕ್ತ ಮತ್ತು ಮೂತ್ರ ಪರೀಕ್ಷೆ – ಎಂ-ಪ್ರೋಟೀನ್ ಪತ್ತೆ ಮಾಡಲು.
- ಬೋನ್ ಮ್ಯಾರೋ ಬಯಾಪ್ಸಿ – ಮೂಳೆ ಮಜ್ಜೆಯಲ್ಲಿನ ಕ್ಯಾನ್ಸರ್ ಕೋಶಗಳನ್ನು ಪರಿಶೀಲಿಸಲು.
- ಎಕ್ಸ್-ರೇ, ಎಂಆರ್ಐ ಅಥವಾ ಸಿಟಿ ಸ್ಕ್ಯಾನ್ – ಎಲುಬಿನ ಹಾನಿ ತಿಳಿಯಲು.
ಚಿಕಿತ್ಸೆಯ ವಿಧಾನಗಳು
ರೋಗಿಯ ವಯಸ್ಸು, ಆರೋಗ್ಯ ಹಾಗೂ ಕ್ಯಾನ್ಸರ್ ಹಂತವನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ.
- ಕೀಮೋಥೆರಪಿ – ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು.
- ಟಾರ್ಗೆಟೆಡ್ ಥೆರಪಿ – ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯಲು.
- ಸ್ಟೆರಾಯ್ಡ್ಗಳು – ಉರಿಯೂತ ಮತ್ತು ರೋಗದ ತೀವ್ರತೆ ಕಡಿಮೆ ಮಾಡಲು.
- ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟ್ – ಹಾನಿಗೊಳಗಾದ ಮೂಳೆ ಮಜ್ಜೆಯ ಬದಲಿಗೆ ಆರೋಗ್ಯಕರ ಕೋಶಗಳನ್ನು ಬೆಳೆಸಲು.
- ಸಹಾಯಕ ಔಷಧಿಗಳು – ಎಲುಬುಗಳನ್ನು ಬಲಪಡಿಸಲು ಹಾಗೂ ಸೋಂಕು ತಡೆಯಲು.
ಸಂಪೂರ್ಣ ಗುಣಮುಖವಾಗಬಹುದೇ?
ಮಲ್ಟಿಪಲ್ ಮೈಲೋಮಾವನ್ನು ಸಂಪೂರ್ಣವಾಗಿ ಗುಣಪಡಿಸುವುದು ಯಾವಾಗಲೂ ಸಾಧ್ಯವಾಗದೇ ಇರಬಹುದು. ಆದರೆ ಸರಿಯಾದ ಚಿಕಿತ್ಸೆ ಹಾಗೂ ವೈದ್ಯರ ನಿರಂತರ ಮೇಲ್ವಿಚಾರಣೆಯಿಂದ ದೀರ್ಘಕಾಲ ನಿಯಂತ್ರಣದಲ್ಲಿ ಇಡಬಹುದು. ಮುಂಚಿತವಾಗಿ ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸಿದರೆ ಉತ್ತಮ ಜೀವನಮಟ್ಟ ಕಾಯ್ದುಕೊಳ್ಳಲು ಸಾಧ್ಯ.
ಗಮನಿಸಬೇಕಾದ ಪ್ರಮುಖ ಅಂಶಗಳು
- ಸ್ಮೋಲ್ಡರಿಂಗ್ ಮೈಲೋಮಾ ಎಂಬ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸದಿರಬಹುದು. ಈ ಹಂತದಲ್ಲಿ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ.
- ಕಿಡ್ನಿಗಳ ರಕ್ಷಣೆಗಾಗಿ ದಿನಕ್ಕೆ 2–3 ಲೀಟರ್ ನೀರು ಕುಡಿಯುವುದು ಉತ್ತಮ.
- ಉಪ್ಪು ಮತ್ತು ಪ್ರೋಟೀನ್ ಸೇವನೆ ಕುರಿತು ವೈದ್ಯರ ಸಲಹೆ ಪಡೆಯಬೇಕು.
- ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಿ, ಕಚ್ಚಾ ತರಕಾರಿ ಮತ್ತು ಸಲಾಡ್ಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
- ವೈದ್ಯರ ಸಲಹೆಯಂತೆ ನ್ಯುಮೋನಿಯಾ ಮತ್ತು ಫ್ಲೂ ಲಸಿಕೆ ಪಡೆಯುವುದು ಸೋಂಕು ತಡೆಯಲು ಸಹಕಾರಿ.
- ಎಲುಬುಗಳು ದುರ್ಬಲವಾಗಿರುವುದರಿಂದ ಭಾರವಾದ ವಸ್ತುಗಳನ್ನು ಎತ್ತಬಾರದು. ಫಿಸಿಯೋಥೆರಪಿಸ್ಟ್ ಸಲಹೆಯಂತೆ ವಾಕಿಂಗ್ನಂತಹ ಲಘು ವ್ಯಾಯಾಮ ಮಾಡಬಹುದು.
ತಜ್ಞರ ಅಭಿಪ್ರಾಯದಂತೆ, ನಿರಂತರ ಎಲುಬು ನೋವು, ಅತಿಯಾದ ಆಯಾಸ ಅಥವಾ ಪದೇ ಪದೇ ಸೋಂಕು ಕಾಣಿಸಿದರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಮುಂಚಿತ ಪತ್ತೆ ಮತ್ತು ಸಕಾಲದ ಚಿಕಿತ್ಸೆಯೇ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡುವ ಪ್ರಮುಖ ಮಾರ್ಗವಾಗಿದೆ.

