ವೈವಾಹಿಕ ವಿವಾದ ಮತ್ತು ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಯ ಶೀಲದ ಕುರಿತು ಗಂಭೀರ ಆರೋಪ ಎದುರಾದಾಗ ಹಾಗೂ ಮಗುವಿನ ಜೈವಿಕ ತಂದೆ ತಾನಲ್ಲ ಎಂದು ಪತಿ ವಾದಿಸಿದ ಸಂದರ್ಭದಲ್ಲಿ ಮಗುವನ್ನು ಪಿತೃತ್ವ ಪರೀಕ್ಷೆಗೆ (DNA Test) ಒಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ಬಲವಾಗಿ ವಿರೋಧಿಸಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮಹಿಳೆಯು, “ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸುವಂತಿಲ್ಲ ಎಂಬುದು ಕಾನೂನಿನ ಸ್ಥಾಪಿತ ನಿಯಮ. ಆದ್ದರಿಂದ ಪಿತೃತ್ವ ಪರೀಕ್ಷೆಯಿಲ್ಲದೆಯೇ ಪತಿಯ ವಿಚ್ಛೇದನ ಅರ್ಜಿಯನ್ನು ಇತ್ಯರ್ಥಪಡಿಸಬೇಕು” ಎಂದು ವಾದಿಸಿದರು. ಆದರೆ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, “ಒಂದು ವೇಳೆ ನೀವು ನಿಷ್ಠಾವಂತರಾಗಿದ್ದರೆ (Loyal), ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿತು. ಅಲ್ಲದೆ, ಪುಣೆ ಕೌಟುಂಬಿಕ ನ್ಯಾಯಾಲಯ ಹಾಗೂ ಬಾಂಬೆ ಹೈಕೋರ್ಟ್ ಈ ಹಿಂದೆ ಡಿಎನ್‌ಎ ಪರೀಕ್ಷೆಗೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.
ಏನಿದು ಪ್ರಕರಣದ ಹಿನ್ನೆಲೆ? ಪತ್ನಿಯ ಶೀಲದ ನಡವಳಿಕೆಯನ್ನು ಪ್ರಶ್ನಿಸಿ ವಿಚ್ಛೇದನ ಕೋರಿದ್ದ ಪತಿಯು, ಮಗುವಿನ ಜೈವಿಕ ತಂದೆ ತಾನಲ್ಲ ಎಂದು ಪ್ರತಿಪಾದಿಸಿದ್ದರು. ತನ್ನ ಆರೋಪಕ್ಕೆ ಪುಷ್ಟಿ ನೀಡಲು ಹೈದರಾಬಾದ್‌ನ ಖಾಸಗಿ ಪ್ರಯೋಗಾಲಯದಲ್ಲಿ ಮಾಡಿಸಲಾಗಿದ್ದ ಪ್ರಾಥಮಿಕ ಡಿಎನ್‌ಎ ಪರೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆ ವರದಿಯಲ್ಲಿ ಆತ ಮಗುವಿನ ತಂದೆಯಾಗುವ ಸಾಧ್ಯತೆ ಶೂನ್ಯ (Zero Probability) ಎಂದು ಉಲ್ಲೇಖವಾಗಿತ್ತು.
ಈ ವರದಿಯನ್ನು ಆಧರಿಸಿ ವಿಚ್ಛೇದನ ಪ್ರಕ್ರಿಯೆಗೆ ಅಧಿಕೃತ ನ್ಯಾಯಾಲಯದ ನಿರ್ದೇಶನದಂತೆ ಡಿಎನ್‌ಎ ಪರೀಕ್ಷೆ ನಡೆಸಲು ಪತಿ ಕೋರಿದ್ದರು. ಬಾಂಬೆ ಹೈಕೋರ್ಟ್ ಇದನ್ನು ಪುರಸ್ಕರಿಸಿ, “ಪತ್ನಿಯ ನಿಷ್ಠೆಯನ್ನು ಪ್ರಶ್ನಿಸಿರುವ ಈ ಪ್ರಕರಣದಲ್ಲಿ ಆರೋಪ ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಯ ವರದಿಯೇ ಅಂತಿಮ ಹಾಗೂ ನಿರ್ಣಾಯಕ ಸಾಕ್ಷ್ಯವಾಗಿದೆ” ಎಂದು ಆದೇಶಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿರುವುದರಿಂದ ಮಗುವಿನ ಪಿತೃತ್ವ ಪರೀಕ್ಷೆ ನಡೆಸಲು ಮಾರ್ಗ ಸುಗಮವಾಗಿದೆ.

