ಡಿಎಂಕೆ-ಕಾಂಗ್ರೆಸ್ ಮೈತ್ರಿಯ ನಡುವೆ ಅಪಸ್ವರ ಇದೆಯೇ?. ಹೌದು, ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಸೀಟು ಹಂಚಿಕೆ ಚರ್ಚೆಯಲ್ಲಿ ಒಮ್ಮತ ಮೂಡಿಲ್ಲ ಎಂಬ ಸುದ್ದಿ ಹಬ್ಬಿದೆ. 2021ರ ಚುನಾವಣೆಯಲ್ಲಿ 133 ಸೀಟುಗಳನ್ನು ಗೆದ್ದು ರಾಜ್ಯದಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದಾರೆ.
2026ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ತಮಿಳುನಾಡು ಪ್ರಮುಖವಾಗಿದೆ. ಆದರೆ ರಾಜ್ಯದ ಚುನಾವಣಾ ಚಿತ್ರಣವನ್ನು ಬದಲಿಸಿರುವುದು ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ. ಆದ್ದರಿಂದ ಈ ಬಾರಿಯ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಡಿಎಂಕೆ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ 32 ಸೀಟುಗಳನ್ನು ನೀಡುವುದಾಗಿ ಹೇಳಿದೆ. ಈ ವಿಚಾರಕ್ಕೆ ತಮಿಳುನಾಡು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದು, ನೇರವಾಗಿ ಹೈಕಮಾಂಡ್ ನಾಯಕರ ಮೊರೆ ಹೋಗಿದ್ದಾರೆ. ಕೇವಲ 32 ಸೀಟು ಕೊಡುವುದಾದರೆ ನಟ ವಿಜಯ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳೋಣ ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ನಟ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ ಮತ್ತು ಎನ್‌ಡಿಎ, ಇಂಡಿಯಾ ಮೈತ್ರಿಕೂಟದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಣೆ ಮಾಡಿದೆ. ಈ ನಡುವೆಯೇ ಕಾಂಗ್ರೆಸ್ ಟಿವಿಕೆ ಪಕ್ಷದ ಮೈತ್ರಿ ಮಾತುಕತೆ ಸುದ್ದಿ ಹಬ್ಬಿದೆ.
ಮೈತ್ರಿಕೂಟದಲ್ಲಿ ಬಿರುಕು: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 40 ಸೀಟು ನೀಡಬೇಕು ಎಂಬುದು ಕಾಂಗ್ರೆಸ್ ಬೇಡಿಕೆ. ಅಂತಿಮವಾಗಿ 38 ಸೀಟುಗಳಿಗೆ ಸಹ ಒಪ್ಪುವ ನಿರೀಕ್ಷೆ ಇದೆ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 18 ಸೀಟುಗಳಲ್ಲಿ ಜಯಗಳಿಸಿದ್ದು, ಡಿಎಂಕೆ ಪಕ್ಷಕ್ಕೆ ಬೆಂಬಲ ನೀಡಿತ್ತು.
ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್, ಕನಿಷ್ಠ 38 ರಿಂದ 40 ಸೀಟು ನೀಡಬೇಕು. ಡಿಎಂಕೆ 32 ಸೀಟುಗಳ ಆಫರ್ ನೀಡಿದೆ. ಇದು ಕೇವಲ ಸೀಟು ಹಂಚಿಕೆ. ಮೈತ್ರಿಕೂಟ ಗೆದ್ದರೆ ಅಧಿಕಾರ ಹಂಚಿಕೆಗೆ ಬೇರೆ ಸೂತ್ರವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಎಂಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಟ ವಿಜಯ್ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಉತ್ತಮ ಸ್ನೇಹಿತರು. ಆದ್ದರಿಂದ ಡಿಎಂಕೆ ಕಡಿಮೆ ಸೀಟು ನೀಡಿದರೆ ಕಾಂಗ್ರೆಸ್ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿಗೆ ಸಲಹೆ ನೀಡಲಾಗಿದೆ.
ಡಿಎಂಕೆ ಮೇಲೆ ಒತ್ತಡ ಹಾಕಲು ಕಾಂಗ್ರೆಸ್ ಟಿವಿಕೆ ಕಾರ್ಡ್ ಬಳಕೆ ಮಾಡುತ್ತಿದೆ. ಮೈತ್ರಿ ಬಗ್ಗೆ ಪಕ್ಷದ ಮುಖ್ಯಸ್ಥ ವಿಜಯ್ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇದ್ದು, ಮಾತುಕತೆಗಳು ನಡೆಯುತ್ತಿವೆ ಎಂದು ಟಿವಿಕೆ ಪಕ್ಷದ ನಾಯಕ ನಿರ್ಮಲ್ ಕುಮಾರ್ ಹೇಳಿದ್ದಾರೆ.
ಇನ್ನು ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಾತನಾಡಿ ಟಿವಿಕೆ ಪಕ್ಷದ ಜೊತೆಗಿನ ಮೈತ್ರಿಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
“ಡಿಎಂಕೆ ವಿಶ್ವಾಸಾರ್ಹ ಮತ್ತು ದೀರ್ಘಕಾಲದ ಕಾಂಗ್ರೆಸ್ ಮಿತ್ರಪಕ್ಷವಾಗಿದೆ. ನಾವು ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಸೀಟು ಹಂಚಿಕೆ ಸೇರಿ ವಿವಿಧ ವಿಚಾರಗಳ ಕುರಿತು ಶೀಘ್ರವೇ ಡಿಎಂಕೆ ನಾಯಕರ ಜೊತೆ ಚರ್ಚೆ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.
ತಮಿಳುನಾಡು ಚುನಾವಣೆಗಾಗಿ ಈಗಾಗಲೇ ಎಐಎಡಿಎಂಕೆ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ನಾಯಕಿ, ನಟಿ ಖುಷ್ಬೂ ಸಹ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವಿಜಯ್‌ಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೆಲವು ದಿನಗಳ ಹಿಂದೆ ಸಲಹೆ ನೀಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ, ಬಿಜೆಪಿ-ಎಐಎಡಿಎಂಕೆ ಮತ್ತು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ನಡುವೆ ರಾಜ್ಯದಲ್ಲಿ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ತಮಿಳುನಾಡು ಜೊತೆಗೆ ಪಕ್ಕದ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಚುನಾವಣೆ ನಡೆಯಲಿದ್ದು, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿಗಳು ಅಲ್ಲಿಯೂ ಕಣಕ್ಕಿಳಿಯಲಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ಕೆಲವೇ ರಾಜ್ಯಗಳಲ್ಲಿ ತಮಿಳುನಾಡು ಸಹ ಒಂದು. ಒಂದು ವೇಳೆ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಈ ಬಾರಿಯ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಮುಖಭಂಗವಾಗಲಿದೆ.

