ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳ್ಳಂಬೆಳಗ್ಗೆ ಮಂಗಳೂರಿನ ಬಂದರಿಗೆ ಭೇಟಿ ನೀಡಿ ಮೀನುಗಾರರೊಂದಿಗೆ ಮಾತುಕತೆ ನಡೆಸಿದರು. ಬಂದರಿನಲ್ಲಿರುವ ದಕ್ಕೆ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು.
ಮೀನುಗಾರಿಕಾ ಹಡಗುಗಳನ್ನು ನಿಲ್ಲಿಸುವ ಸ್ಥಳವನ್ನು ಸ್ಥಳೀಯವಾಗಿ ‘ದಕ್ಕೆ’ ಎಂದು ಕರೆಯಲಾಗುತ್ತದೆ. ಈ ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ, ಸಮುದ್ರದಿಂದ ಮೀನುಗಾರರು ತಂದು ಇಳಿಸಿದ ತಾಜಾ ಮೀನುಗಳನ್ನು ವೀಕ್ಷಿಸಿದರು.
ಬಂದರಿನಲ್ಲಿ ಮೀನುಗಳ ವ್ಯಾಪಾರ ಮತ್ತು ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಪರಿಶೀಲಿಸಿದರು. ಇದೇ ವೇಳೆ ಮೀನುಗಾರರಿಂದ ವಿವಿಧ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ಮೂಲಸೌಕರ್ಯ, ಬಂದರು ವ್ಯವಸ್ಥೆ ಸೇರಿದಂತೆ ಸ್ಥಳೀಯ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದಲೂ ಸಿಎಂ ಮಾಹಿತಿ ಪಡೆದರು. ಈ ವೇಳೆ ಮೀನುಗಾರರೊಂದಿಗೆ ಮಾತುಕತೆ ನಡೆಸಿದ ಡಿ.ಕೆ. ಶಿವಕುಮಾರ್, ಅವರ ಬೇಡಿಕೆಗಳು ಹಾಗೂ ಬಂದರು ಪ್ರದೇಶದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಅಧಿಕಾರಿಗಳಿಂದಲೂ ಬಂದರಿನಲ್ಲಿನ ಮೀನುಗಾರಿಕಾ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮೀನುಗಾರರೊಂದಿಗೆ ಆತ್ಮೀಯವಾಗಿ ಬೆರೆತು ಅವರ ದಿನನಿತ್ಯದ ಚಟುವಟಿಕೆಗಳನ್ನು ವೀಕ್ಷಿಸಿದ ಸಿಎಂ, ಮೀನುಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ಸಚಿವ ಯು.ಟಿ ಖಾದರ್ ಸೇರಿದಂತೆ ಮತ್ತಿತರರು ಸಿಎಂ ಗೆ ಸಾಥ್ ನೀಡಿದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಧಾರವಾಡ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2026-27 ಸಾಲಿನ ಭೂ ಒಡೆತನ ಯೋಜನೆ, ನೇರಸಾಲ ಯೋಜನೆ, ಸ್ವಯಂ ಉದ್ಯೋಗ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಹೈನುಗಾರಿಕೆ ಯೋಜನ (ಬ್ಯಾಂಕ್‍ಗಳ ಸಹಯೋಗದೊಂದಿಗೆ), ಸ್ವಾವಲಂಭಿ ಸಾರಥಿ ಯೋಜನೆ, ಫಾಸ್ಟ್ ಪುಡ್ ಟ್ರಕ್, ಮೊಬೈಲ್ ಕಿಚನ್ ಪುಡ್ ಕಿಯೋಸ್ಕ (KIOSK) ಯೋಜನೆ, ಗಂಗಾ ಕಲ್ಯಾಣ ಯೋಜನೆ, ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಆನ್‍ಲೈನ್ ಸೇವಾ ಸಿಂಧು ತಂತ್ರಾಂಶದ ಮುಖಾಂತರ ಅಕ್ಟೋಬರ್ 17, 2026 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟ ಮತ್ತು ಸರ್ಕಾರದ ಸಾಂಸ್ಥೀಕ ಕೋಟಾದಡಿ ಸಲ್ಲಿಸುವ ಅರ್ಜಿಗಳನ್ನು ಸಹಾ ಸೇವಾ ಸಿಂಧು ತಂತ್ರಾಂಶದ ಮುಖಾಂತರವೇ ಸಲ್ಲಿಸುವದು. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಕ್ಕೆಜೋಳ ಮೇವು ರಕ್ಷಣೆಗೆ ಸಲಹೆ
ಧಾರವಾಡ : ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರು ಹಾಗೂ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಮೆಕ್ಕೆಜೋಳದ ಮೇವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಎಸ್.ವ್ಹಿ.ಸಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಈಗಾಗಲೇ ಹುಬ್ಬಳ್ಳಿ, ಹುಬ್ಬಳ್ಳಿ ನಗರ, ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳನ್ನು ರಾಜ್ಯ ಸರಕಾರ ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಸುಮಾರು 38,105 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ (ಗೋವಿನ ಜೋಳ) ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದ ಇಳುವರಿ ಕುಂಠಿತವಾಗುವ ಸಾಧ್ಯತೆ ಇದ್ದರೂ ಮೇವು ಉತ್ಪಾದನೆಯಾಗುವ ನಿರೀಕ್ಷೆ ಇದೆ. ಹಿಂದಿನ ವರ್ಷಗಳಲ್ಲಿ ಕೆಲ ರೈತರು ತಾವು ಬೆಳೆದ ಮೆಕ್ಕೆಜೋಳದ ಮೇವನ್ನು ಕಟಾವು ಮಾಡಿ ಸಂರಕ್ಷಿಸದೆ ಹೊಲದಲ್ಲಿಯೇ ಗೊಬ್ಬರವಾಗಿ ಕೊಳೆಯಲು ಬಿಟ್ಟಿರುವುದು ಅಥವಾ ಸುಟ್ಟುಹಾಕಿರುವುದು ಕಂಡುಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಜಾನುವಾರುಗಳ ಹಿತದೃಷ್ಟಿಯಿಂದ ಅಗತ್ಯ ಪರಿಸ್ಥಿತಿ ಎದುರಾದಲ್ಲಿ ಜಿಲ್ಲಾಡಳಿತದಿಂದ ಗೋಶಾಲೆ ಅಥವಾ ಮೇವಿನ ಬ್ಯಾಂಕ್‍ಗಳನ್ನು ಪ್ರಾರಂಭಿಸುವ ಅಗತ್ಯ ಬರಬಹುದು. ಈ ಸಂದರ್ಭದಲ್ಲಿ ರೈತರು ಸಂಗ್ರಹಿಸಿಟ್ಟುಕೊಂಡಿರುವ ಹೆಚ್ಚುವರಿ ಮೇವನ್ನು ಜಿಲ್ಲಾಡಳಿತದ ವತಿಯಿಂದ ಖರೀದಿಸುವ ಸಾಧ್ಯತೆಯೂ ಇದೆ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳದ ಮೇವನ್ನು ಉತ್ತಮ ರೀತಿಯಲ್ಲಿ ಬಣವೆ ಹಾಕಿ ಅಥವಾ ಅಚ್ಚುಗಳಾಗಿ ಪರಿವರ್ತಿಸಿ ಸಂರಕ್ಷಿಸಿಡಬೇಕು.
ಇಳುವರಿ ಕಡಿಮೆ ಆಗುವ ಆತಂಕದಲ್ಲಿರುವ ರೈತರು, ಹಸಿರು ಮೆಕ್ಕೆ ಜೋಳದ ಬೆಳೆಯನ್ನು ಕಟಾವು ಮಾಡಿ ತುಂಡರಿಸಿ, ರಸ ಮೇವಾಗಿ ಸಹ ಪರಿವರ್ತಿಸಬಹುದಾಗಿದೆ. ಈ ರಸ ಮೇವನ್ನು ಬರಗಾಲದಲ್ಲಿ ಅವಶ್ಯಕತೆ ಅನುಗುಣವಾಗಿ ಬಳಸ ಬಹುದಾಗಿರುತ್ತದೆ. ತಮ್ಮಲ್ಲಿರುವ ಹೆಚ್ಚುವರಿ ಮೇವಿನ ಪ್ರಮಾಣದ ವಿವರಗಳನ್ನು ಸಮೀಪದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮಳೆ ಕೊರತೆಯಿಂದ ಎದುರಾಗಬಹುದಾದ ಮೇವಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ರೈತರು ಈಗಿನಿಂದಲೇ ಮೇವು ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಡಾ. ಎಸ್.ವ್ಹಿ.ಸಂತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

