ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ ಮುಕ್ತಾಯ ಹಂತಕ್ಕೆ ತಲುಪಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಿಗ್ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ ಹಾಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಭರ್ಜರಿ ಭವಿಷ್ಯ ನುಡಿದಿದ್ದಾರೆ. ಇನ್ನು ಜಾತಕದ ಪ್ರಕಾರ ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.
ಶೃಂಗೇರಿಯಲ್ಲಿ ದೇವಿಯ ಮುಂದೆ ಪ್ರಾರ್ಥಿಸುವಾಗಲೇ ಬಂತು ಕರೆ
ದ್ವಾರಕನಾಥ್ ಗುರೂಜಿ, ಡಿಕೆಶಿ ಜೊತೆಗಿನ 35 ವರ್ಷಗಳ ಒಡನಾಟದ ರಹಸ್ಯ ಬಿಚ್ಚಿಟ್ಟಿದ್ದಾರೆ”ಡಿಕೆಶಿಗೆ ಸಿಎಂ ಪಟ್ಟ ಸಿಗುವುದು ವಿಳಂಬವಾಗುತ್ತಿದ್ದ ಕಾರಣ ನಾನು ಅವರ ಪರವಾಗಿ ವಿಶೇಷ ಪೂಜೆ ಸಲ್ಲಿಸಲು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಹೋಗಿದ್ದೆ. ಆಶ್ಚರ್ಯವೆಂದರೆ, ನಾನು ದೇವಿಯ ಮುಂದೆ ಪ್ರಾರ್ಥನೆ ಮಾಡುತ್ತಾ ಕುಳಿತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ನನಗೆ ಫೋನ್ ಕಾಲ್ ಮಾಡಿ ಗುರೂಜಿ, ಕೆಲಸ ಆಗಿದೆ’ ಎಂದು ಸಿಹಿ ಸುದ್ದಿ ನೀಡಿದರು.”
ದಶಕಗಳ ಹಿಂದೆ ಎಸ್. ಬಂಗಾರಪ್ಪನವರ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, ‘ನೀನು ಮುಂದೊಂದು ದಿನ ಈ ರಾಜ್ಯಕ್ಕೆ ಸಿಎಂ ಆಗ್ತೀಯಾ’ ಎಂದು ತಾವು ನುಡಿದಿದ್ದ ಭವಿಷ್ಯ ಈಗ ನಿಜವಾಗುತ್ತಿದೆ ಎಂದು ಗುರೂಜಿ ಹೆಮ್ಮೆಯಿಂದ ಸ್ಮರಿಸಿದ್ದಾರೆ.
ಸಿದ್ದರಾಮಯ್ಯ ರಾಜಯೋಗ ಅಂತ್ಯ; ಡಿಕೆಶಿಗೆ ಶುರುವಾಯ್ತು ಗುರು ಬಲ
ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಜಾತಕದ ಗ್ರಹಗತಿಗಳ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ನಡೆಸಿದ ಗುರೂಜಿ, “ಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಸದ್ಯ ಅವರಿಗೆ ಗುರು ಬಲ ಮತ್ತು ಶನಿ ಬಲ ಎರಡೂ ಇಲ್ಲ. ಹೀಗಾಗಿ ಅವರ ಸಿಎಂ ಆಗುವ ರಾಜಯೋಗ ಈಗ ಮುಗಿದಿದೆ. ಆದರೆ, ಈ ರಾಜ್ಯಕ್ಕೆ ಅವರ ಮಾರ್ಗದರ್ಶನದ ಅಗತ್ಯ ಖಂಡಿತಾ ಇದೆ. ಇತ್ತ ಡಿಕೆಶಿಗೆ ಅತ್ಯಂತ ಸುವರ್ಣ ಸಮಯ ಆರಂಭವಾಗಿದೆ. ಗೋಚಾರ ಫಲದ ಪ್ರಕಾರ ಗುರು ಈಗ ಮಿಥುನ ರಾಶಿಯಲ್ಲಿದ್ದಾನೆ. ಇದು ಡಿಕೆಶಿಗೆ ಭಾರಿ ರಾಜಯೋಗ ತರಲಿದ್ದು, ಮುಂದಿನ ಎಂಟು ವರ್ಷ ಈ ರಾಜ್ಯದಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಆಗಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಕುಮಾರ್ ಅನ್ನೋದೇ ಒಂದು ದೊಡ್ಡ ಬ್ರ್ಯಾಂಡ್
“ಡಿಕೆಶಿ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಅವರೇ ಒಂದು ದೊಡ್ಡ ಬ್ರ್ಯಾಂಡ್. ಅವರು ತುಂಬಾ ಬುದ್ಧಿವಂತ ಮತ್ತು ಅಪಾರ ಸಹನೆ ಇರುವ ವ್ಯಕ್ತಿ. ಸಿದ್ದರಾಮಯ್ಯ ಅವರ ಆಪ್ತರನ್ನು ಕೂಡ ಜೊತೆಯಲ್ಲೇ ಕರೆದುಕೊಂಡು ಹೋಗಿ ಒಂದು ಅತ್ಯುತ್ತಮ ಸರ್ಕಾರವನ್ನು ಅವರು ನೀಡಲಿದ್ದಾರೆ. ಸಿಎಂ ಆದ ಮೇಲೆ ಬೆಂಗಳೂರಿನ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಸರಿಪಡಿಸಬೇಕು ಎಂಬ ದೊಡ್ಡ ಚಿತ್ರಣ ಅವರ ಕಣ್ಣಮುಂದಿದೆ” ಎಂದು ಗುರೂಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

