ಬೆಂಗಳೂರು: ರಾಜ್ಯ ರಾಜಕಾರಣದ ಅತ್ಯಂತ ಐತಿಹಾಸಿಕ ಹಾಗೂ ಬಹುನಿರೀಕ್ಷಿತ ಕ್ಷಣಕ್ಕೆ ಕೊನೆಗೂ ಸಾಕ್ಷಿಯಾಗಿದೆ ಸಿಲಿಕಾನ್ ಸಿಟಿ. ಹಲವು ತಿಂಗಳುಗಳಿಂದ ನಡೆಯುತ್ತಿದ್ದ ತೀವ್ರ ಕುತೂಹಲ ಹಾಗೂ ರಾಜಕೀಯ ಚರ್ಚೆಗಳಿಗೆ ಅಧಿಕೃತ ತೆರೆಬಿದ್ದಿದ್ದು, ಕೆಪಿಸಿಸಿ ಸಾರಥಿ, ಕಾಂಗ್ರೆಸ್ನ ಅಪ್ರತಿಮ ತಂತ್ರಗಾರ ಡಿ.ಕೆ. ಶಿವಕುಮಾರ್ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.ಬೆಂಗಳೂರಿನ ಭವ್ಯ ಲೋಕಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಹಾಗೂ ಗಣ್ಯರ ಸಮ್ಮುಖದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ನೂತನ ಸಿಎಂಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಸಾಂಪ್ರದಾಯಿಕ ಲುಕ್, ವೀರ ಗಂಗಾಧರ ಅಜ್ಜನ ಹೆಸರಲ್ಲಿ ಆಣೆಯಾವಾಗಲೂ ಬಿಳಿ ಜುಬ್ಬಾ-ಪೈಜಾಮದಲ್ಲಿ ಮಿಂಚುತ್ತಿದ್ದ ಡಿ.ಕೆ.ಶಿವಕುಮಾರ್ ಇಂದು ಕಂಪ್ಲೀಟ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ರೇಷ್ಮೆ ಪಂಚೆ, ರೇಷ್ಮೆ ಜುಬ್ಬಾ ಹಾಗೂ ಶಲ್ಯ ಧರಿಸಿ ರಾಜ ಗಾಂಭೀರ್ಯದಲ್ಲಿ ವೇದಿಕೆ ಏರಿದ ಡಿಕೆಶಿ, ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಜ್ಯೋತಿಷ್ಯ ಶಾಸ್ತ್ರದ ಅತ್ಯಂತ ಅಪರೂಪದ ಹಾಗೂ ಶಕ್ತಿಶಾಲಿ ರಾಜಯೋಗವಾದ ಮಾಲವ್ಯ ಯೋಗ ಹಾಗೂ ತುಲಾ ಲಗ್ನದ ಭರ್ಜರಿ ಮುಹೂರ್ತದಲ್ಲೇ ಈ ಪಟ್ಟಾಭಿಷೇಕ ನೆರವೇರಿದೆ. ಪ್ರಸ್ತುತ ಜಾತಕದಲ್ಲಿ ಗುರು ಗ್ರಹವು ಉಚ್ಚ ಸ್ಥಿತಿಯಲ್ಲಿ ಇರುವುದರಿಂದ ಮುಂಬರುವ ದಿನಗಳಲ್ಲಿ ನೂತನ ಸಿಎಂ ಡಿಕೆಶಿ ಅವರಿಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಆನೆ ಬಲ ಸಿಗಲಿದೆ ಎಂದು ಆಸ್ಟ್ರೋ ತಜ್ಞರು ವಿಶ್ಲೇಷಿಸಿದ್ದಾರೆ.ಲೋಕಭವನದಲ್ಲಿ ರಾಷ್ಟ್ರೀಯ ನಾಯಕರ ದಂಡು: ಕಂಗೊಳಿಸಿದ ವೇದಿಕೆ ಇಂದಿನ ಈ ಭವ್ಯ ರಾಜಕೀಯ ಪಟ್ಟಾಭಿಷೇಕದ ಕ್ಷಣಕ್ಕೆ ದೇಶ ಮತ್ತು ರಾಜ್ಯದ ಘಟಾನುಘಟಿ ನಾಯಕರು ಸಾಕ್ಷಿಯಾದರು. ವೇದಿಕೆಯ ಮುಂಭಾಗದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಉಪಸ್ಥಿತರಿದ್ದರು.
ಇವರ ಜೊತೆಗೆ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳಾದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳದ ಹಿರಿಯ ನಾಯಕ ವಿ.ಡಿ. ಸತೀಶನ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಾದ ಹರಿಪ್ರಸಾದ್, ಮೊಹಮ್ಮದ್ ಅಜರುದ್ದೀನ್ ಮತ್ತು ರಾಜೀವ್ ಶುಕ್ಲಾ ಭಾಗವಹಿಸಿದ್ದರು. ಕೇವಲ ರಾಜಕೀಯ ನಾಯಕರಷ್ಟೇ ಅಲ್ಲದೆ, ನಾಡಿನ ವಿವಿಧ ಮಠಾಧೀಶರು, ಮುಸ್ಲಿಂ ಮೌಲ್ವಿಗಳು, ಚರ್ಚ್ಗಳ ಮುಖ್ಯಸ್ಥರು, ಸಿನಿಮಾ ತಾರೆಗಳು ಹಾಗೂ ಡಿಕೆಶಿ ಕುಟುಂಬಸ್ಥರು ಈ ಅಪರೂಪದ ಕ್ಷಣವನ್ನು ಕಣ್ಣಾರೆ ವೀಕ್ಷಿಸಿದರು.
ಭಿನ್ನಮತ ಮರೆತು ಬಂದ ಬಿಜೆಪಿ ಶಾಸಕರು
ಈ ಕಾರ್ಯಕ್ರಮದ ಅತ್ಯಂತ ಹೈಲೈಟ್ ಎಂದರೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಉಚ್ಛಾಟಿತ ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಕೂಡ ವೇದಿಕೆಯ ಮುಂಭಾಗದಲ್ಲಿ ಪ್ರತ್ಯಕ್ಷರಾಗಿ ಡಿಕೆಶಿ ಅವರಿಗೆ ಶುಭ ಹಾರೈಸಿದ್ದು, ರಾಜ್ಯ ರಾಜಕಾರಣದ ಮುಂದಿನ ಹೊಸ ಮುನ್ಸೂಚನೆಗೆ ಸಾಕ್ಷಿಯಾಯಿತು.
ತಳಮಟ್ಟದ ಯೂತ್ ಕಾಂಗ್ರೆಸ್ ಹೋರಾಟದಿಂದ ಬಂದು, ಇಂದು ವಿಧಾನಸೌಧದ ಗದ್ದುಗೆ ಏರಿರುವ ಕನಕಪುರ ಬಂಡೆಯ ನೂತನ ಆಡಳಿತದ ಸಾರಥ್ಯ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ.

