HomeKarnatakaದೊಡ್ಡಆಲಹಳ್ಳಿಯ ಸಾಮಾನ್ಯ ಹುಡುಗ ಇಂದು ಕರ್ನಾಟಕದ ಕಿಂಗ್ ಮೇಕರ್: ಡಿ.ಕೆ. ಶಿವಕುಮಾರ್ ರಾಜಕೀಯ ಸಾಮ್ರಾಜ್ಯದ ಕಂಪ್ಲೀಟ್...

ದೊಡ್ಡಆಲಹಳ್ಳಿಯ ಸಾಮಾನ್ಯ ಹುಡುಗ ಇಂದು ಕರ್ನಾಟಕದ ಕಿಂಗ್ ಮೇಕರ್: ಡಿ.ಕೆ. ಶಿವಕುಮಾರ್ ರಾಜಕೀಯ ಸಾಮ್ರಾಜ್ಯದ ಕಂಪ್ಲೀಟ್ ಸ್ಟೋರಿ

ಬೆಂಗಳೂರು: ಕನಕಪುರ ತಾಲೂಕಿನ ಸಣ್ಣ ಗ್ರಾಮವೊಂದರಲ್ಲಿ ಜನಿಸಿ, ಇಂದು ಕರ್ನಾಟಕ ರಾಜಕಾರಣದ ದಿಕ್ಸೂಚಿಯನ್ನು ಬದಲಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿರುವ ನಾಯಕ ಡಿ.ಕೆ. ಶಿವಕುಮಾರ್. ರಾಜಕೀಯದಲ್ಲಿ ಸೋಲು-ಗೆಲುವು, ಏಳು-ಬೀಳು, ಜೈಲು-ಅಧಿಕಾರ ಎಲ್ಲವನ್ನೂ ಹತ್ತಿರದಿಂದ ನೋಡಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶ
ಜನನ ಹಾಗೂ ಹಿನ್ನೆಲೆ: ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ಅವರ ಮೊದಲ ಪುತ್ರನಾಗಿ ಶಿವಕುಮಾರ್ ಜನಿಸಿದರು.

ಆರಂಭಿಕ ದಿನಗಳು: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ (ಎನ್‌ಎಸ್‌ಯುಐ) ಬೆಂಗಳೂರು ಘಟಕದ ಅಧ್ಯಕ್ಷರಾಗುವ ಮೂಲಕ ವಿದ್ಯಾರ್ಥಿ ನಾಯಕನಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವೇಗೌಡರ ವಿರುದ್ಧವೇ ರಾಜಕೀಯ ಫೈಟ್
ಮೊದಲ ಸೆಣಸಾಟ: ಕೇವಲ ೨೩ನೇ ವಯಸ್ಸಿನಲ್ಲಿಯೇ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಎಚ್‌.ಡಿ. ದೇವೇಗೌಡ ವಿರುದ್ಧ ಅಖಾಡಕ್ಕಿಳಿದರು.

ಗಮನ ಸೆಳೆದ ಸೋಲು: ಈ ಚುನಾವಣೆಯಲ್ಲಿ 15 ,000 ಮತಗಳ ಅಂತರದಿಂದ ಸೋತರೂ, ದೈತ್ಯ ನಾಯಕನಿಗೆ ಪ್ರಬಲ ಸ್ಪರ್ಧೆ ಒಡ್ಡಿದ ಕಾರಣಕ್ಕೆ ಕಾಂಗ್ರೆಸ್ ಹಿರಿಯ ನಾಯಕರ ಗಮನ ಸೆಳೆದರು.

ಮುಂದಿನ ಹೆಜ್ಜೆ: ಬಳಿಕ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾದರು.

ಮೊದಲ ಬಾರಿ ಶಾಸಕ, 30ಕ್ಕೇ ಸಚಿವ ಗರಿ
ಮೊದಲ ಗೆಲುವು (1989): ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ವಿರುದ್ಧ 30.945ಮತಗಳ ಭಾರಿ ಅಂತರದಿಂದ ಗೆದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಕಿರಿಯ ಸಚಿವ: ಅಂದಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಸಂಪುಟದಲ್ಲಿ ಬಂದಿಖಾನೆ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ೩೦ನೇ ವಯಸ್ಸಿಗೇ ಸಚಿವರಾದ ಹೆಗ್ಗಳಿಕೆ ಇವರದ್ದಾಯಿತು.

ಬಂಡಾಯದ ಗೆಲುವು (1994): ಕಾಂಗ್ರೆಸ್‌ನಿಂದ ಟಿಕೆಟ್‌ ನಿರಾಕರಿಸಲ್ಪಟ್ಟಾಗ ಧೃತಿಗೆಡದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು.

ಕುಮಾರಸ್ವಾಮಿ ವಿರುದ್ಧ ಗೆಲುವು & ಕೃಷ್ಣ ಸಂಪುಟದಲ್ಲಿ ಸಚಿವ
ಎಚ್‌ಡಿಕೆ ವಿರುದ್ಧ ಜಯ (1999): ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಸಾತನೂರಿನಲ್ಲಿ ಸ್ಪರ್ಧಿಸಿ ಭಾರಿ ಅಂತರದ ಗೆಲುವು ದಾಖಲಿಸಿದರು.

ಪ್ರಭಾವಿ ಖಾತೆಗಳು: ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಮತ್ತು ಸಹಕಾರ ಸಚಿವರಾಗಿ ಪ್ರಮುಖ ಜವಾಬ್ದಾರಿ ನಿಭಾಯಿಸಿದರು.

ರಣತಂತ್ರ ಮತ್ತು ಹೈಕಮಾಂಡ್ ಮೆಚ್ಚಿದ ಚಾಣಕ್ಯತನ
ಸಂಪುಟದಿಂದ ಹೊರಕ್ಕೆ (2004): ಶಾಸಕನಾಗಿ ಚುನಾಯಿತರಾದರೂ ಕಾಂಗ್ರೆಸ್‌ಗೆ ಅಲ್ಪಮತ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಆದರೆ ರಾಜಕೀಯ ಕಾರಣಗಳಿಗಾಗಿ ಸಚಿವ ಸಂಪುಟದಿಂದ ಹೊರಗುಳಿಯಬೇಕಾಯಿತು.

ದೇವೇಗೌಡರಿಗೆ ಶಾಕ್ (2004ಲೋಕಸಭೆ): ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡರ ವಿರುದ್ಧ ಪತ್ರಕರ್ತೆ ತೇಜಸ್ವಿನಿಗೌಡ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿ, ಗೆಲ್ಲಿಸುವ ಮೂಲಕ ತಮ್ಮ ರಾಜಕೀಯ ರಣತಂತ್ರ ಏನೆಂಬುದನ್ನು ಹೈಕಮಾಂಡ್‌ಗೆ ಸಾಬೀತುಪಡಿಸಿದರು.

ಕನಕಪುರದ ನಾಯಕ (2008-2012): ಕನಕಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಆದರೆ, ಆರಂಭದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಬಳಿಕ ೨೦೧೪ರಲ್ಲಿ ಇಂಧನ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಐಟಿ-ಇಡಿ ದಾಳಿ ಮತ್ತು ತಿಹಾರ್ ಜೈಲು ವಾಸ
ಸರಣಿ ದಾಳಿಗಳು: ಇಂಧನ ಸಚಿವರಾಗಿದ್ದ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳಿಂದ ಶಿವಕುಮಾರ್‌ ಮತ್ತು ಅವರ ಆಪ್ತರ ಮನೆಗಳ ಮೇಲೆ ಭಾರಿ ದಾಳಿ ನಡೆಯಿತು. ಐಟಿ ದಾಳಿಯ ಆಧಾರದಲ್ಲಿ ಜಾರಿ ನಿರ್ದೇಶನಾಲಯದಿಂದಲೂ (ED) ಪ್ರಕರಣ ದಾಖಲಾಗಿ ವಿಚಾರಣೆ ಎದುರಿಸಿದರು.

ಮೈತ್ರಿ ಸರ್ಕಾರದಲ್ಲಿ ಸಚಿವ (೨೦೧೮): ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬೃಹತ್‌ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದರು.

ಬಂಧನ ಮತ್ತು ಸೆರೆವಾಸ (2019): ಸೆಪ್ಟೆಂಬರ್ ೩ರಂದು ಹಣ ಅಕ್ರಮ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾದರು. ದೆಹಲಿಯ ಪ್ರಸಿದ್ಧ ತಿಹಾರ್‌ ಜೈಲಿನಲ್ಲಿ 50 ದಿನಗಳ ಕಾಲ ಸೆರೆವಾಸ ಅನುಭವಿಸಿ, ಅಕ್ಟೋಬರ್ ೨೩ರಂದು ಜಾಮೀನಿನ ಮೇಲೆ ಬಿಡುಗಡೆಯಾದರು.

ಕೆಪಿಸಿಸಿ ಸಾರಥ್ಯ ಮತ್ತು ಉಪಮುಖ್ಯಮಂತ್ರಿ ಪಟ್ಟ
ಪಕ್ಷ ಸಂಘಟನೆ: ಜೈಲಿನಿಂದ ಬಂದ ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್, ಇಡೀ ರಾಜ್ಯಾದ್ಯಂತ ಮಿಂಚಿನ ಸಂಚಾರ ನಡೆಸಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು.

ಕಾಂಗ್ರೆಸ್ ದಿಗ್ವಿಜಯ (2023): ಇವರ ಚುನಾವಣಾ ತಯಾರಿ ಮತ್ತು ಕಠಿಣ ಪರಿಶ್ರಮದ ಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು.

ಡಿಸಿಎಂ ಪಟ್ಟ: ಶಾಸಕರ ಗೆಲುವಿನ ಬಳಿಕ ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ಪಟ್ಟು ಹಿಡಿದರಾದರೂ, ಹೈಕಮಾಂಡ್ ಸೂಚನೆಗೆ ತಲೆಬಾಗಿ ಸದ್ಯ ಉಪ ಮುಖ್ಯಮಂತ್ರಿ ಹುದ್ದೆ ಹಾಗೂ ಪ್ರಭಾವಿ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular