ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಯಾವುದೇ ಒಂದು ಪಕ್ಷದ ಗೆಲುವು- ಸೋಲಿನಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುವ ಭಾಗವೆಂದರೆ ಅದುವೇ ಹಳೆ ಮೈಸೂರು ಭಾಗ!
ಕಾಂಗ್ರೆಸ್ ,ಬಿಜೆಪಿ, ಹಾಗೂ ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಗೂ ಹಳೆ ಮೈಸೂರು ಪ್ರದೇಶ ಎಂದರೆ ಒಂದು ರೀತಿ ಮೈಸೂರು ಪಾಕ್ ತಿಂದಷ್ಟೇ ಖುಷಿ!
ಒಂದು ಪಕ್ಷದ ಸೋಲು, ಇಲ್ಲವೇ ಗೆಲುವನ್ನು ತೀರ್ಮಾನಿಸಬಹುದಾದ ಈ ಪ್ರದೇಶವು ರಾಜಕೀಯವಾಗಿ ಜಿದ್ದಾಜಿದ್ದಿಗೂ ಕೂಡ ಅಷ್ಟೇ ಹೆಸರುವಾಸಿ. ಹಗೆತನ, ಜಿದ್ದು, ಸೇಡು ವೈಯಕ್ತಿಕ ಪ್ರತಿಷ್ಠೆ ಹೀಗೆ ರಾಜಕಾರಣಕ್ಕೆ ಬೇಕಾದ ಎಲ್ಲಾ ತಂತ್ರ- ಪ್ರತಿತಂತ್ರ, ಅಸ್ತ್ರ – ಪ್ರತ್ಯಸ್ತ್ರಗಳನ್ನು ಬಳಸುವ ಕಲೆಗಾರಿಕೆ ವಿಶೇಷವಾಗಿ ಹಳೆ ಮೈಸೂರಲ್ಲಿ ಭಾಗದಲ್ಲಿ ಕಂಡು ಬರುತ್ತದೆ.
ತುಮಕೂರು, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ ,ಬೆಂಗಳೂರು ದಕ್ಷಿಣ ( ಹಿಂದಿನ ರಾಮನಗರ) ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ, ಸುಮಾರು 70 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ತುಮಕೂರು, ಮೈಸೂರು ಮತ್ತು ಚಾಮರಾಜನಗರಗಳಲ್ಲಿ ಲಿಂಗಾಯಿತ, ಹಿಂದುಳಿದ ಮತ್ತು ಪರಿಶಿಷ್ಟ ಜಾತಿ , ಹಾಗೂ ಹಿಂದುಳಿದ ಮತಗಳುನಿರ್ಣಾಯಕವಾಗಿದ್ದರೆ ,ಉಳಿದ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ಒಕ್ಕಲಿಗರೇ ನಿರ್ಣಯಕ ಸ್ಥಾನದಲ್ಲಿದ್ದಾರೆ.ಹೀಗಾಗಿ ರಾಜ್ಯದ ಎರಡನೇ ಪ್ರಭಾವಿ ಶಕ್ತಿಶಾಲಿ ಸಮುದಾಯ ಎನಿಸಿರುವ ಒಕ್ಕಲಿಗರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮೂರು ರಾಜಕೀಯ ಪಕ್ಷಗಳಿಗೂ ಈ ಸಮುದಾಯವನ್ನು ಓಲೈಸಿಕೊಳ್ಳುವುದು ಅನಿವಾರ್ಯವಾಗಿದೆ.
ಇದೀಗ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಯಾಗಿ ಬುಧವಾರ ಅಧಿಕಾರ ಗದ್ದುಗೆ ಹಿಡಿಯುತ್ತಿದ್ದಂತೆ,ಹಳೆ ಮೈಸೂರು ಪ್ರಾಂತ್ಯ ಮತ್ತೊಮ್ಮೆ ರಾಜಕೀಯ ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಲಿದೆ. ಹಳೆ ಮೈಸೂರು ಭಾಗದಲ್ಲಿ ಮೊದಲಿನಿಂದಲೂ ದೇವೇಗೌಡರ ಕುಟುಂಬಕ್ಕೂ ಹಾಗೂ ಡಿಕೆ ಶಿವಕುಮಾರ್ ಕುಟುಂಬಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ!
ಮೊದಲಿನಿಂದಲೂ ರಾಜಕೀಯವಾಗಿ ಡಿಕೆ ಶಿವಕುಮಾರ್ ಅವರನ್ನು ಮಣಿಸಲು ದೇವೇಗೌಡರ ಕುಟುಂಬ ತನ್ನೆಲ್ಲ ಶಕ್ತಿ- ಯುಕ್ತಿಗಳನ್ನು ಬಳಸಿದರೂ ಎಲ್ಲವನ್ನೂ ಮೆಟ್ಟಿ ರಾಜಕೀಯವಾಗಿ ಮೇಲೆ ಬಂದವರು ಕನಕಪುರದ ಬಂಡೆ ಖ್ಯಾತಿಯ ಡಿಕೆಶಿ.
ಇದೀಗ ಡಿಕೆ ಶಿವಕುಮಾರ್ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವುದು ವಿಶೇಷವಾಗಿ ಗೌಡರ ಕುಟುಂಬಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಹೆಚ್ಚಿನ ಅಸ್ತಿತ್ವ ಉಳಿಸಿಕೊಂಡಿದೆ .2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಒಂದಿಷ್ಟು ನಿರೀಕ್ಷಿಸಲಾಗದ ಹಿನ್ನಡೆ ಉಂಟಾಗಿದ್ದರೂ ದಳಪತಿಗಳ ಬೇರುಗಳು ಇಲ್ಲಿ ಸಾಕಷ್ಟು ಬೇರೂರಿವೆ.
ಇದೀಗ ಡಿಕೆ ಶಿವಕುಮಾರ್ ಸಿಎಂ ಸ್ಥಾನದಲ್ಲಿ ಆಸೀನರಾಗುತ್ತಿರುವುದು ಸಹಜವಾಗಿ ಜೆಡಿಎಸ್ ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಹೀಗಾಗಿ ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ರಣತಂತ್ರವನ್ನು ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದ
ಈ ಹಿಂದೆ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಿಕೊಂಡಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 2023ರ ಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆಗೆ ಈ ಭಾಗದಲ್ಲಿ ಭಾರಿ ಹಿನ್ನಡೆಯಾಗಿತ್ತು. ಅದಕ್ಕೆ ಕಾರಣ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ಅವರು ನನಗೆ “ಒಂದು ಬಾರಿ ಪೇಪರ್ ಪೆನ್ ಕೊಟ್ಟು ನೋಡಿ” ಎಂದು ಮತದಾರರಲ್ಲಿ ಮಾಡಿಕೊಂಡ ಮನವಿ ವಿಶೇಷವಾಗಿ ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್ ಕಡೆ ತಿರುಗುವಂತೆ ಮಾಡಿತ್ತು. ಇದು ಕಿಂಗ್ ಮೇಕರ್ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಗೆ ಫಲಿತಾಂಶ ಮರ್ಮಘಾತ ಕೊಟ್ಟಿತ್ತು.
ಬದಲಾದ ರಾಜಕೀಯ ಲೆಕ್ಕಾಚಾರ
ಸದ್ಯದ ಬೆಳವಣಿಗೆಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಿರುವುದು, ಈ ಭಾಗದ ರಾಜಕೀಯ ಸಮೀಕರಣವನ್ನು ಸಂಪೂರ್ಣವಾಗಿ ಬದಲಿಸುವ ಮುನ್ಸೂಚನೆ ನೀಡಿವೆ.
ಡಿ.ಕೆ. ಶಿವಕುಮಾರ್ ಅವರು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‍ನ ಬೇರುಗಳನ್ನು ಗಟ್ಟಿಗೊಳಿಸಲು ಮತ್ತು ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮಲು ರಣತಂತ್ರ ರೂಪಿಸುತ್ತಿದ್ದಾರೆ.
ಒಕ್ಕಲಿಗ ಮತದಾರರ ಮೇಲೆ ತಮ್ಮ ಹಿಡಿತವನ್ನು ಸಾಧಿಸುವ ಮೂಲಕ, ಜೆಡಿಎಸ್‍ನ ಸಾಂಪ್ರದಾಯಿಕ ಮತಬ್ಯಾಂಕಿಗೆ ಕನ್ನ ಹಾಕುವ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಆಗುತ್ತಿರುವುದು ಅವರನ್ನು ಒಕ್ಕಲಿಗ ಸಮುದಾಯದ ಅತ್ಯಂತ ಪ್ರಭಾವಿ ಧುರೀಣನನ್ನಾಗಿ ಬಿಂಬಿಸಿದೆ. ಇದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.
ಹಳೆ ಮೈಸೂರು ಭಾಗದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಒಕ್ಕಲಿಗ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷಯವಾಗಿದೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಸಾಂಪ್ರದಾಯಿಕ ಬೆಂಬಲ ಹೊಂದಿರುವ ಜೆಡಿಎಸ್ ಅನ್ನು ಮೀರಿಸಿ ಮತಗಳನ್ನು ಸೆಳೆಯುವುದು ಅವರಿಗೆ ದೊಡ್ಡ ಸವಾಲಾಗಿದೆ.
ರಾಜ್ಯ ರಾಜಕಾರಣದ ಸಮೀಕರಣ: ಯಾವುದೇ ಪಕ್ಷವು ಕೇವಲ ಒಂದು ಭಾಗ ಅಥವಾ ಸಮುದಾಯದ ಮೇಲೆ ಅವಲಂಬಿತವಾಗಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕಷ್ಟ. ಹೀಗಾಗಿ ಅವರು ರಾಜ್ಯಾದ್ಯಂತ ತಮ್ಮ ವರ್ಚಸ್ಸನ್ನು ವಿಸ್ತರಿಸಬೇಕಾದ ಅನಿವಾರ್ಯತೆಯೂ ಇದೆ.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಡಿ.ಕೆ. ಶಿವಕುಮಾರ್ ಅವರು ಈ ಸಮುದಾಯದ ಪ್ರಬಲ ನಾಯಕರಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೂಲಕ, ಜೆಡಿಎಸ್‍ನ ಭದ್ರಕೋಟೆಯಾಗಿರುವ ಈ ಭಾಗದಲ್ಲಿ ಕಾಂಗ್ರೆಸ್‍ನ ನೆಲೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ.ಹಳೆ ಮೈಸೂರು ಭಾಗದ ವಿವಿಧ ಜಿಲ್ಲೆಗಳಲ್ಲಿ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಲು ಅವರು ನಿರಂತರ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಮುಖಂಡರನ್ನು ಸೆಳೆಯುವುದು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸುವುದು ಅವರ ಕಾರ್ಯತಂತ್ರವಾಗಿದೆ.ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗದೆ, ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಒಕ್ಕಲಿಗ ಮತಗಳೊಂದಿಗೆ ಜೋಡಿಸುವ ಮೂಲಕ ಗೆಲುವಿನ ಸಮೀಕರಣವನ್ನು ರೂಪಿಸಲು ಅವರು ಪ್ರಯತ್ನಿಸುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಹಳೆ ಮೈಸೂರು ಭಾಗದಲ್ಲಿ ತಮ್ಮ ಬೇರುಗಳನ್ನು ಮತ್ತಷ್ಟು ಆಳವಾಗಿಸುವ ಮೂಲಕ, ತಮ್ಮ ರಾಜಕೀಯ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟ.
ದಳಪತಿಗಳ ಅಳಿವು-ಉಳಿವಿನ ಹೋರಾಟ
ಒಂದು ಕಾಲದಲ್ಲಿ ಹಳೇ ಮೈಸೂರು ಭಾಗದ “ಕೋಟೆ” ಎನಿಸಿಕೊಂಡಿದ್ದ ಜೆಡಿಎಸ್‍ಗೆ, ಡಿಕೆಶಿಯವರ ಈ ಬೆಳವಣಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪ್ರಭಾವ ಹೆಚ್ಚಾದಂತೆ, ಜೆಡಿಎಸ್‍ನಿಂದ ಒಕ್ಕಲಿಗ ಮತದಾರರು ಕಾಂಗ್ರೆಸ್‍ನತ್ತ ವಲಸೆ ಹೋಗುವ ಆತಂಕ ಎದುರಾಗಿದೆ.ಜೆಡಿಎಸ್‍ನ ಬಲಹೀನತೆಯನ್ನು ಬಳಸಿಕೊಂಡು ಆ ಭಾಗದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ತನ್ನ ಪ್ರಾಬಲ್ಯ ಮೆರೆಯಲು ಪ್ರಯತ್ನಿಸುತ್ತಿದೆ. ಇದು ಎಚ್.ಡಿ. ಕುಮಾರಸ್ವಾಮಿ ಅವರ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕ್ಷೇತ್ರಗಳ ಮೇಲೆ ಗಮನ:
ಕೇಂದ್ರ ಸಚಿವರಾಗಿದ್ದು ಕೊಂಡೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಕುಮಾರಸ್ವಾಮಿ, ಈ ಭಾಗದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದತ್ತ ಹೆಚ್ಚಿನ ಗಮನಹರಿಸುತ್ತಿದ್ದಾರೆ. ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಲು ಅವರು ಕ್ಷೇತ್ರ ಪ್ರವಾಸ ಮತ್ತು ಕಾರ್ಯಕರ್ತರ ಸಭೆಗಳನ್ನು ತೀವ್ರಗೊಳಿಸಿದ್ದಾರೆ.ಡಿಕೆಶಿ ಮತ್ತು ಕುಮಾರಸ್ವಾಮಿ ನಡುವಿನ ಈ ಸಮರವು, ಮುಂಬರುವ ದಿನಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಇದು ನೇರವಾಗಿ ಒಕ್ಕಲಿಗ ನಾಯಕತ್ವದ ವರ್ಚಸ್ಸು ಸ್ಥಾಪಿಸುವ ಕದನವಾಗಿದೆ. ಹಳೇ ಮೈಸೂರು ಭಾಗ ಈಗ ಇಬ್ಬರು ಪ್ರಬಲ ಒಕ್ಕಲಿಗ ನಾಯಕರ ನೇರ ಸಂಘರ್ಷದ ಕೇಂದ್ರಬಿಂದುವಾಗಿದೆ. ಡಿಕೆಶಿಯವರು ಅಧಿಕಾರದ ಬಲದಿಂದ ಜೆಡಿಎಸ್‍ನ ನೆಲೆಗಳನ್ನು ಅಲುಗಾಡಿಸುತ್ತಿದ್ದರೆ, ಕುಮಾರಸ್ವಾಮಿ ತಮ್ಮ ಸಾಂಪ್ರದಾಯಿಕ ಮತಬ್ಯಾಂಕ್ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ರಾಜಕೀಯ ಜಿದ್ದಾಜಿದ್ದಿ ಮುಂಬರುವ ದಿನಗಳಲ್ಲಿ ಕರ್ನಾಟಕದ ರಾಜಕೀಯ ಚಿತ್ರಣವನ್ನು ಮತ್ತಷ್ಟು ಕುತೂಹಲಕಾರಿಯಾಗಿಸಲಿದೆ.
ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ?
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತಾದ ಚರ್ಚೆಗಳು ರಾಜಕೀಯ ವಲಯದಲ್ಲಿ ಆಗಾಗ ಕೇಳಿಬರುತ್ತಿರುತ್ತವೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಕುಮಾರಸ್ವಾಮಿಯವರು ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಜೆಡಿಎಸ್ ಪಕ್ಷದ ಭವಿಷ್ಯ ಮತ್ತು 2028ರ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ರಾಜಕಾರಣದ ಮೇಲೂ ತೀವ್ರ ನಿಗಾ ವಹಿಸಿದ್ದಾರೆ.
ಪಕ್ಷ ಸಂಘಟನೆ: 2028ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಅವರು ರಾಜ್ಯದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪಕ್ಷದ ಅಸ್ತಿತ್ವ ಮತ್ತು ಪ್ರಭಾವವನ್ನು ಹೆಚ್ಚಿಸಲು ಅವರು ರಾಜ್ಯದಾದ್ಯಂತ ಪ್ರವಾಸಗಳನ್ನು ಕೈಗೊಳ್ಳುವ ಅಥವಾ ಸಂಘಟನಾತ್ಮಕ ಸಭೆಗಳನ್ನು ನಡೆಸುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಇಂಗಿತವನ್ನು ಹಲವು ಬಾರಿ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರಾಗಿ ದೆಹಲಿಯಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ, ರಾಜ್ಯದಲ್ಲಿ ನಡೆಯುವ ಪ್ರಮುಖ ರಾಜಕೀಯ ವಿದ್ಯಮಾನಗಳು, ಸರ್ಕಾರ ವಿರೋಧಿ ಹೋರಾಟಗಳು ಮತ್ತು ಪಕ್ಷದ ಆಂತರಿಕ ವಿಚಾರಗಳಲ್ಲಿ ಅವರು ಸಕ್ರಿಯವಾಗಿ ಪ್ರತಿಕ್ರಿಯಿಸುತ್ತಾರೆ. ಇದು ಅವರು ರಾಜ್ಯದ ರಾಜಕೀಯದಿಂದ ದೂರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.
ಜೆಡಿಎಸ್ ಪಕ್ಷವನ್ನು 2028ರ ವೇಳೆಗೆ ರಾಜ್ಯದಲ್ಲಿ ಹೆಚ್ಚು ಪ್ರಬಲಗೊಳಿಸಬೇಕೆಂಬುದು ಅವರ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಅವರು ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವುದು ಮತ್ತು ಸರ್ಕಾರದ ಲೋಪದೋಷಗಳ ವಿರುದ್ಧ ಧ್ವನಿ ಎತ್ತುವ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದಾರೆ.ಸದ್ಯಕ್ಕೆ ಕೇಂದ್ರದ ಜವಾಬ್ದಾರಿಯಲ್ಲಿದ್ದರೂ, ಅವರ ಪೂರ್ಣ ಗಮನ ರಾಜ್ಯದ ರಾಜಕೀಯ ವಿದ್ಯಮಾನಗಳ ಮೇಲೆ ಮತ್ತು ಮುಂದಿನ ಚುನಾವಣೆಯ ಮೇಲೆ ಇದೆ.

