ಆರೋಗ್ಯ ಇಲಾಖೆ ವಿಚಾರದಲ್ಲಿ ಕರ್ನಾಟಕ ಬಿಜೆಪಿ ನಾಯಕರು, ಸಚಿವ ದಿನೇಶ್ ಗುಂಡೂರಾವ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ನಡೆಯುತ್ತಿದೆ. ಕರ್ನಾಟಕ ಬಿಜೆಪಿ ಹಾಕಿದ್ದ ಎಡಿಟ್ ಮಾಡಿದ ಫೋಟೋಗೆ ಸಚಿವರು ತಿರುಗೇಟು ನೀಡಿದ್ದಾರೆ.
ಗುರುವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಕಮಿಷನ್ ಮತ್ತು ಭ್ರಷ್ಟಾಚಾರ ಎಂಬುದು ಬಿಜೆಪಿ ಕರ್ನಾಟಕದ ಮೈಗಂಟಿದ ಚರ್ಮ ಅನ್ನೋದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ. 40% ಕಮಿಷನ್ ದಂಧೆಯಿಂದ ಬೇಸತ್ತು ಜನ ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದರೂ, ಎಡಿಟ್ ಮಾಡಿದ ಫೋಟೋ ಹಿಡಿದು ಸುಳ್ಳು ಹರಡುವ ನೀಚತನ ಬಿಟ್ಟಿಲ್ಲ’ ಎಂದು ದೂರಿದ್ದಾರೆ.
‘ಆರೋಗ್ಯ ಇಲಾಖೆಯಲ್ಲಿ ನಾವು ಅತ್ಯಂತ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ, ಧೈರ್ಯವಿದ್ದರೆ ವಾಸ್ತವದ ಅಂಕಿಅಂಶಗಳನ್ನು ನೋಡಿ ಮಾತನಾಡಿ. ಕೇಂದ್ರದ ನಿಮ್ಮದೇ ಮೋದಿ ಸರ್ಕಾರ NHM ಅನುದಾನ ತಡೆಹಿಡಿದಿದ್ದರೂ ರಾಜ್ಯದ ಬಡ ರೋಗಿಗಳಿಗೆ ತೊಂದರೆಯಾಗಬಾರದೆಂದು ನಮ್ಮ ಕಾಂಗ್ರೆಸ್ ಸರ್ಕಾರ ಈಗಾಗಲೇ ₹30 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಹೇಳಿದ್ದಾರೆ.
‘ಇದಲ್ಲದೆ ₹50 ಕೋಟಿ ಹಣವನ್ನು ಔಷಧಿ ಖರೀದಿಗೆ ಮೀಸಲಿಟ್ಟು, 496 ಅಗತ್ಯ ಔಷಧಿಗಳ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ. GeM ಪೋರ್ಟಲ್ ಮೂಲಕವೇ ಅತ್ಯಂತ ಪಾರದರ್ಶಕವಾಗಿ ಖರೀದಿ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.
ಬಿಜೆಪಿ ಕರ್ನಾಟಕ ಪೋಸ್ಟ್: ಬಿಜೆಪಿ ಕರ್ನಾಟಕ ಎಕ್ಸ್ ಖಾತೆಯಲ್ಲಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರೋಗ್ಯ ಇಲಾಖೆಗೆ ಪೆಂಡಭೂತ ಹಿಡಿದಿದೆ. ಸರ್ಕಾರಿ ಆಸ್ಪತ್ರೆಯ ಬಾಗಿಲಲ್ಲಿ ‘ನೋ ಸ್ಟಾಕ್’ ಬೋರ್ಡ್ ಹಿಡಿದು ನಿಂತಿರುವ ಆರೋಗ್ಯ ಸಚಿವರೇ, ಬಡ ರೋಗಿಗಳಿಗೆ ಖಾಸಗಿ ಮೆಡಿಕಲ್ ಶಾಪ್‌ಗಳತ್ತ ಕೈ ತೋರಿಸಿ ಎಷ್ಟು ಕಮಿಷನ್ ಪಡೆಯುತ್ತಿದ್ದೀರಿ? ಸರ್ಕಾರಿ ವ್ಯವಸ್ಥೆಯನ್ನು ಹದಗೆಡಿಸಿ, ಖಾಸಗಿಯವರಿಗೆ ಲಾಭ ಮಾಡಿಕೊಡುವುದು ಯಾರ ಹಿತಾಸಕ್ತಿಗಾಗಿ ದಿನೇಶ್ ಗುಂಡೂರಾವ್’ ಎಂದು ಪ್ರಶ್ನೆ ಮಾಡಿತ್ತು.

