ರಾಜ್ಯಸಭೆಯ ಸುಮಾರು 75 ಸೀಟುಗಳಿಗೆ 2026ರಲ್ಲಿ ಚುನಾವಣೆ ನಡೆಯಬೇಕಿದೆ. ಎನ್‌ಡಿಎ, ಇಂಡಿಯಾ ಮೈತ್ರಿಕೂಟದಲ್ಲಿ ಯಾರಿಗೆ ಎಷ್ಟು ಸೀಟು? ಎಂಬ ಲೆಕ್ಕಾಚಾರಗಳು ಸಾಗಿವೆ. ಇಂತಹ ಹೊತ್ತಿನಲ್ಲಿಯೇ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ರಾಜ್ಯಸಭೆಗೆ ಮರು ಆಯ್ಕೆ ಬೇಡ ಎಂದು ಘೋಷಣೆ ಮಾಡಿದ್ದಾರೆ.
ಮಧ್ಯ ಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ (78) 3ನೇ ಬಾರಿಗೆ ರಾಜ್ಯಸಭೆಗೆ ಮರು ಆಯ್ಕೆ ಬೇಡ ಎಂದು ಮಂಗಳವಾರ ಘೋಷಣೆ ಮಾಡಿದ್ದಾರೆ. ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಏಪ್ರಿಲ್ 19, 2026ರಂದು ಅಂತ್ಯವಾಗಲಿದೆ.
ದಿಗ್ವಿಜಯ್ ಸಿಂಗ್ ಘೋಷಣೆ ಕುರಿತು ಕಾಂಗ್ರೆಸ್‌ನಲ್ಲಿ ಚರ್ಚೆಗಳು ಪ್ರಾರಂಭವಾಗಿದೆ. ಮಾಹಿತಿಗಳ ಪ್ರಕಾರ ಮಧ್ಯಪ್ರದೇಶ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಪ್ರದೀಪ್ ಅಹಿರ್‌ವಾರ್ ಬೇಡಿಕೆಯಂತೆ ಸಿಂಗ್ ಈ ತೀರ್ಮಾನವನ್ನು ಕೈಗೊಂಡಿದ್ದಾರೆ.
ಎಸ್‌ಸಿ ಸಮುದಾಯದ ನಾಯಕರಿಗೆ ರಾಜ್ಯಸಭೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ದಿಗ್ವಿಜಯ್ ಸಿಂಗ್‌ಗೆ ಮನವಿ ಮಾಡಲಾಗಿತ್ತು. ಈ ಬಾರಿ ಎಸ್‌ಸಿ ಸಮಯದಾಯದ ನಾಯಕರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಅವಕಾಶ ನೀಡಿ ಎಂದು ದಿಗ್ವಿಜಯ್ ಸಿಂಗ್‌ಗೆ ಜನವರಿ 13ರಂದು ಪ್ರದೀಪ್ ಪತ್ರವನ್ನು ಬರೆದಿದ್ದರು.
ದಿಗ್ವಿಜಯ್ ಸಿಂಗ್ ಹೇಳಿದ್ದೇನು?: ಮಾಧ್ಯಮಗಳು ಪ್ರದೀಪ್ ಅಹಿರ್‌ವಾರ್ ಪತ್ರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ದಿಗ್ವಿಜಯ್ ಸಿಂಗ್, “ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ನನ್ನ ಕೈಯಲ್ಲಿ ಏನೂ ಇಲ್ಲ. ನಾನು ರಾಜ್ಯಸಭೆಗೆ ಮರು ಆಯ್ಕೆ ಬೇಡ ಎಂದು ಹೇಳಿದ್ದೇನೆ” ಎಂದರು.
ಮಧ್ಯ ಪ್ರದೇಶದಲ್ಲಿ ಶೇ 17ರಷ್ಟು ಎಸ್‌ಸಿ ಸಮಯದಾಯದ ಜನರಿದ್ದಾರೆ. ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಮುಖ್ಯವಾಗಿದೆ. ಆದ್ದರಿಂದ ಸಂವಿಧಾನಾತ್ಮಕ ಮೌಲ್ಯಗಳನ್ನು ಪರಿಗಣಿಸಿ ಸಮಯದಾಯದ ನಾಯಕರಿಗೆ ರಾಜ್ಯಸಭೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ದಿಗ್ವಿಜಯ್ ಸಿಂಗ್ ಬಳಿ ಮನವಿ ಸಲ್ಲಿಸಲಾಗಿತ್ತು.
ಈ ಬಾರಿ ಮಧ್ಯಪ್ರದೇಶದಿಂದ ಎಸ್‌ಸಿ ಸಮಯದಾಯದ ನಾಯಕನನ್ನು ರಾಜ್ಯಸಭೆಗೆ ಕಳಿಸಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಪತ್ರದಲ್ಲಿ ದಿಗ್ವಿಜಯ್ ಸಿಂಗ್‌ಗೆ ಬೇಡಿಕೆ ಇಡಲಾಗಿತ್ತು.
ದಿಗ್ವಿಜಯ್ ಸಿಂಗ್ 2019, 2024ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. 2014ರಿಂದ ಅವರು ರಾಜ್ಯಸಭೆ ಸದಸ್ಯರಾಗಿದ್ದಾರೆ. ಎರಡು ಬಾರಿ ಅವರನ್ನು ಮಧ್ಯಪ್ರದೇಶ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಈಗ ಅವರ ಅವಧಿ ಪೂರ್ಣಗೊಳ್ಳುತ್ತಿದ್ದು, 3ನೇ ಬಾರಿಗೆ ಮರು ಆಯ್ಕೆ ಬೇಡ ಎಂದು ಹೇಳಿದ್ದಾರೆ. ದಿಗ್ವಿಜಯ್ ಸಿಂಗ್ 1993 ರಿಂದ 2003ರ ತನಕ ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಭಾರೀ ಪ್ರಭಾವ ಹೊಂದಿರುವ ದಿಗ್ವಿಜಯ್ ಸಿಂಗ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆಪ್ತ ವಲಯದ ನಾಯಕರಲ್ಲಿ ದಿಗ್ವಿಜಯ್ ಸಿಂಗ್ ಸಹ ಒಬ್ಬರು.
2026ರಲ್ಲಿ ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ.ದೇವೇಗೌಡ, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಹಿರಿಯ ನಾಯಕರ ರಾಜ್ಯಸಭೆಯ ಅವಧಿ ಮುಕ್ತಾಯವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದು, ಅವರನ್ನು ಪಕ್ಷ ಮರು ಆಯ್ಕೆ ಮಾಡಲಿದೆ ಎಂಬ ಸುದ್ದಿ ಹಬ್ಬಿದೆ.
ಈಗಾಗಲೇ ಎನ್‌ಡಿಎ ಮೈತ್ರಿಕೂಟ ರಾಜ್ಯಸಭೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕಿಂತ ಅಧಿಕ ಸದಸ್ಯ ಬಲವನ್ನು ಹೊಂದಿದೆ. 2026ರಲ್ಲಿ ನಡೆಯುವ ಚುನಾವಣೆಯಲ್ಲಿ ಇನ್ನಷ್ಟು ಸೀಟುಗಳನ್ನು ಗೆದ್ದು ತನ್ನ ಬಲ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ.

