ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ ‘ದಿ ಪ್ಯಾರಡೈಸ್’ ಸೆಪ್ಟೆಂಬರ್ 24, 2026 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಶ್ರೀಕಾಂತ್ ಒಡೇಲ ನಿರ್ದೇಶನದ ಈ ಸಿನಿಮಾ ಪ್ರಕಟವಾದ ದಿನದಿಂದಲೂ ಚಿತ್ರಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಈ ನಡುವೆ ಚಿತ್ರತಂಡ ಇದುವರೆಗೆ ಎಲ್ಲೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ಸಂಜೆ 4 ಗಂಟೆಗೆ ನಾನಿ ಹಾಗೂ ಚಿತ್ರದ ಪ್ರಮುಖ ತಂಡ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಲಿದ್ದು, ಇಡೀ ಸಿನಿರಂಗದ ಕಣ್ಣು ಈ ಕಾರ್ಯಕ್ರಮದ ಮೇಲೆ ನೆಟ್ಟಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರು ಹಾಗೂ ನಟ ನಾನಿ ಸಿನಿಮಾದ ಬಗ್ಗೆ ಏನೆಲ್ಲಾ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಶ್ರೀಕಾಂತ್ ಒಡೇಲ ಸೃಷ್ಟಿಸಿರುವ ಈ ಕಥಾ ಜಗತ್ತು ಮತ್ತು ನಾನಿ ಅವರ ಪಾತ್ರದ ಬಗ್ಗೆ ಕೆಲವು ರಹಸ್ಯಗಳು ಇಂದು ಹೊರಬೀಳುವ ಸಾಧ್ಯತೆಯಿದೆ. ಈ ಚಿತ್ರದಲ್ಲಿ ಕಾಯಾದು ಲೋಹರ್ ನಾಯಕಿಯಾಗಿ ನಟಿಸುತ್ತಿದ್ದು, ಹಿರಿಯ ನಟ ಮೋಹನ್ ಬಾಬು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ರಾಘವ್ ಜುಯಲ್, ತನಿಕೆಲ್ಲ ಭರಣಿ ಹಾಗೂ ಸಂಪೂರ್ಣೇಶ್ ಬಾಬು ಮುಂತಾದ ದೊಡ್ಡ ತಾರಾಗಣವೇ ಸಿನಿಮಾದಲ್ಲಿದೆ.
ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ನಾದಸಂಯೋಜನೆ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನಡೆಯುತ್ತಿರುವ ಈ ಪತ್ರಿಕಾಗೋಷ್ಠಿ ಅಭಿಮಾನಿಗಳಲ್ಲಿ ಹೊಸ ಆಸಕ್ತಿ ಹುಟ್ಟುಹಾಕಿದೆ.

